ನವದೆಹಲಿ: ದೇಶದಲ್ಲಿ ಕೋವಿಡ್-19 ಒಟ್ಟು ಪ್ರಕರಣದಲ್ಲಿ ಮರಣ ಪ್ರಮಾಣ (ಸಿಎಫ್‌ಆರ್) ಶೇ 1.5ಕ್ಕಿಂತ ಕಡಿಮ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.
'ಹೆಚ್ಚಿನ ಪರೀಕ್ಷೆ, ಸೋಂಕಿತರ ಸಂಪರ್ಕಿತರ ಪತ್ತೆ ಹಾಗೂ ಚಿಕಿತ್ಸೆಯೇ ಮರಣ ಪ್ರಮಾಣ ಇಳಿಕೆಗೆ ಕಾರಣ' ಎಂದು ಸಚಿವಾಲಯ ಹೇಳಿದೆ. ದೇಶದಲ್ಲಿ ಪ್ರತಿ 10 ಲಕ್ಷ ಜನರಿಗೆ ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ 88. ದೇಶದ ಒಟ್ಟು 23 ರಾಜ್ಯಗಳಲ್ಲಿ ಸಿಎಫ್‌ಆರ್, ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.
ಶುಕ್ರವಾರ ದೇಶದಲ್ಲಿ ಒಟ್ಟು 551 ಕೋವಿಡ್-19 ಸಾವಿನ ಪ್ರಕರಣಗಳು ದಾಖಲಾಗಿದ್ದು, ನಿತ್ಯ ಸಂಭವಿಸುತ್ತಿರುವ ಸಾವಿನ ಪ್ರಕರಣ ಕ್ರಮೇಣವಾಗಿ ಇಳಿಕೆಯಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಸಚಿವಾಲಯವು ತಿಳಿಸಿದೆ. ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇ 65 ಸಾವು ಐದು ರಾಜ್ಯಗಳಲ್ಲಿ ಸಂಭವಿಸಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಶೇ 36.04, ಕರ್ನಾಟಕದಲ್ಲಿ ಶೇ 9.16, ತಮಿಳುನಾಡಿನಲ್ಲಿ ಶೇ 9.12, ಉತ್ತರ ಪ್ರದೇಶದಲ್ಲಿ ಶೇ 5.76 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ 5.58 ಸಾವಿನ ಪ್ರಕರಣಗಳು ದಾಖಲಾಗಿವೆ.
ಗುಣಮುಖರ ಸಂಖ್ಯೆ 74 ಲಕ್ಷಕ್ಕೆ ಏರಿಕೆ: ಶುಕ್ರವಾರ ಒಂದೇ ದಿನ 59,454 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 74 ಲಕ್ಷ ದಾಟಿದೆ. ದೇಶದಲ್ಲಿ ಗುಣಮುಖ ಪ್ರಮಾಣ ಶೇ 91.34ರಷ್ಟಿದೆ ಎಂದು ಸಚಿವಾಲಯವು ತಿಳಿಸಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 8 ಸಾವಿರಕ್ಕೂ ಅಧಿಕ ಜನರು ಸೋಂಕಿನಿಂದ ಗುಣಮುಖರಾಗಿದ್ದು, ಕೇರಳದಲ್ಲಿ 7 ಸಾವಿರಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗುತ್ತಿದ್ದು, ಒಟ್ಟು ಕೋವಿಡ್-19 ಪ್ರಕರಣಗಳ ಪೈಕಿ ಕೇವಲ ಶೇ 7.16 (5,86,649 ಪ್ರಕರಣಗಳು) ಸಕ್ರಿಯ ಪ್ರಕರಣಗಳಿವೆ.