ನವದೆಹಲಿ: ಕೋವಿಡ್-19 ಲಸಿಕೆಗಾಗಿ ಜನರು 2022ರವರೆಗೆ ಕಾಯಬೇಕಾಗಬಹುದು ಎಂದು ಏಮ್ಸ್ ನಿರ್ದೇಶಕ ಹಾಗೂ ಕೋವಿಡ್-19 ನಿರ್ವಹಣೆ ಕಾರ್ಯಪಡೆ ಸದಸ್ಯ ಡಾ ರಂದೀಪ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.
ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಾ. ಗುಲೇರಿಯಾ, ಕೋವಿಡ್ -19 ಲಸಿಕೆಯನ್ನು ಪಡೆಯಲು ಸಾಮಾನ್ಯ ಜನರು 2022ರವರೆಗೆ ಕಾಯಬೇಕಾಗುತ್ತದೆ. ಏಕೆಂದರೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಣಾಮಕಾರಿ ಲಸಿಕೆ ಲಭ್ಯವಾಗಲು ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ದೇಶದ ಜನಸಂಖ್ಯೆ ಅಧಿಕವಾಗಿದ್ದು, ಫ್ಲೂ ಲಸಿಕೆಯಂತೆ ಕೋವಿಡ್-19 ಲಸಿಕೆಯನ್ನು ಹೇಗೆ ಖರೀದಿಸಬೇಕು ಎಂಬುದನ್ನು ನಿರ್ಣಯಿಸಲು ಸಮಯ ಹಿಡಿಯುತ್ತದೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 50,357 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 84,62,081ಕ್ಕೆ ಏರಿಕೆಯಾಗಿದೆ. ಇನ್ನು 577 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 1,25,562ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.