ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ನ 2ನೇ ಅಲೆ ಕ್ರಮೇಣ ಆರಂಭವಾಗುತ್ತಿದ್ದು, ದೆಹಲಿ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಬರುತ್ತಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಅಗ್ರ 2 ಸ್ಥಾನಗಳಲ್ಲಿವೆ. ಅಗ್ರ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 80, 878 ಸಕ್ರಿಯ ಪ್ರಕಣಗಳಿದ್ದು, 2ನೇ ಸ್ಥಾನದಲ್ಲಿರುವ ಕೇರಳದಲ್ಲಿ 66, 982 ಸಕ್ರಿಯ ಪ್ರಕರಣಗಳಿವೆ ಎಂದು ಹೇಳಿದೆ.
ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿ ಕೇರಳ-ಕರ್ನಾಟಕ
ಇನ್ನು ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವಿದ್ದು, ಮಹಾರಾಷ್ಟ್ರ, ಕೇರಳದ ಬಳಿಕ ಅತೀಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯ ಎಂದರೆ ಅದು ದೆಹಲಿ. ರಾಜಧಾನಿ ದೆಹಲಿಯಲ್ಲಿ 39, 741 ಸಕ್ರಿಯ ಪ್ರಕರಣಗಳಿದ್ದು, ನಂತರದ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 25,391, ಕರ್ನಾಟಕದಲ್ಲಿ 24, 733 ಸಕ್ರಿಯ ಪ್ರಕರಣಗಳಿವೆ.
ಉಳಿದಂತೆ ಉತ್ತರ ಪ್ರದೇಶದಲ್ಲಿ 23,471, ರಾಜಸ್ಥಾನದಲ್ಲಿ 21,951, ಛತ್ತೀಸ್ ಗಢದಲ್ಲಿ 20,659, ಹರ್ಯಾಣದಲ್ಲಿ 20,325, ಆಂಧ್ರ ಪ್ರದೇಶದಲ್ಲಿ 14,770, ತಮಿಳುನಾಡಿನಲ್ಲಿ 13,285, ಗುಜರಾತ್ ನಲ್ಲಿ 12,916, ತೆಲಂಗಾಣದಲ್ಲಿ 11,643 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.