ಚೆನ್ನೈ: ತಮಿಳುನಾಡು ಕೃಷಿ ಸಚಿವ ಆರ್. ದೊರೈಕಣ್ಣು ಕೋವಿಡ್-19 ವೈರಸ್ ಗೆ ಬಲಿಯಾಗಿದ್ದಾರೆ. 72 ವರ್ಷದ ಆರ್.ದೊರೈಕಣ್ಣು ತೀವ್ರ ಉಸಿರಾಟದ ತೊಂದರೆ ಹಾಗೂ ಕೋವಿಡ್-19 ಪಾಸಿಟಿವ್ ಕಾರಣ ಅಕ್ಟೋಬರ್ 13 ರಂದು ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.
ಸಚಿವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದಾಗಿ ಆಸ್ಪತ್ರೆ ಶನಿವಾರ ಮಧ್ಯಾಹ್ನ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿತ್ತು. ಗರಿಷ್ಠ ಜೀವ ರಕ್ಷಕದ ಹೊರತಾಗಿಯೂ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿರುವುದಾಗಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅರವಿಂದನ್ ಸೆಲ್ವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದರು.
ಸಿಟಿ ಸ್ಕ್ಯಾನ್ ನಲ್ಲಿ ಅವರ ಶೇ. 90 ರಷ್ಟು ಶ್ವಾಸಕೋಶಗಳು ಹಾಳಾಗಿರುವುದಾಗಿ ಅಕ್ಟೋಬರ್ 25 ರಂದು ಆಸ್ಪತ್ರೆ ತಿಳಿಸಿತ್ತು. ಅಂದೇ ಮುಖ್ಯಮಂತ್ರಿ ಪಳನಿಸ್ವಾಮಿ, ರಾಜ್ಯ ಸಚಿವ ಡಿ. ಜಯಕುಮಾರ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಆರ್. ದೊರೈಕಣ್ಣು ಅವರ ಆರೋಗ್ಯ ವಿಚಾರಿಸಿದ್ದರು.