ನವದೆಹಲಿ: ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಅಂಚೆ ಇಲಾಖೆ ಡಿಜಿಟಲ್ ಜೀವನ ಪ್ರಮಾಣ ಪತ್ರ ಸೇವೆಯನ್ನು ಪ್ರಾರಂಭಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಈ ಸೇವೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಸಹಯೋಗದಲ್ಲಿ ಅಂಚೆ ಇಲಾಖೆ ಈ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಮೂಲಕ ಹಿರಿಯ ನಾಗರಿಕರು ಸುಲಭವಾಗಿ, ಪಿಂಚಣಿ ಬಿಡುಗಡೆ ಮಾಡುವ ಏಜೆನ್ಸಿಯ ಕಚೇರಿಗೆ ಹೋಗದೇ ಜೀವಂತ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ.
ಸ್ಥಳೀಯ ಅಂಚೆಕಚೇರಿ, ಅಂಚೆ ಕಚೇರಿಯಿಂದ ಲಭ್ಯವಿರುವ ಮನೆಬಾಗಿಲಿಗೇ ಬರುವೆ ಬ್ಯಾಂಕಿಂಗ್ ಸೇವೆಗಳು, ಪೋಸ್ಟ್ ಮೆನ್/ ಗ್ರಾಮೀಣ ಅಂಚೆ ಸೇವಕರ (ಗ್ರಾಮೀಣ್ ಡಾಕ್ ಸೇವಕ್) ಗಳಿಂದ ಜೀವಂತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ.
ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಪಿಂಚಣಿದಾರರು ತಮ್ಮ ಪ್ರದೇಶದ ಸ್ಥಳೀಯ ಅಂಚೆ ಸೇವಕರನ್ನು ಸಂಪರ್ಕಿಸಬಹುದಾಗಿದೆ ಅಥವಾ ಪೋಸ್ಟ್ ಇನ್ಫೋ ಆಪ್ ಮೂಲಕ ತಮ್ಮ ಬೇಡಿಕೆಯನ್ನು ನೋಂದಾಯಿಸಬಹುದಾಗಿದೆ.
ಈ ಪ್ರಕ್ರಿಯೆಗಾಗಿ ಪಿಂಚಣಿದಾರರು ತಮ್ಮ ಆಧಾರ್, ಮೊಬೈಲ್ ನಂಬರ್, ಪಿಂಚಣಿ ವಿವರಗಳನ್ನು ನೀಡಬೇಕಾಗುತ್ತದೆ. ಮನೆ ಬಳಿಯೇ ಡಿಜಿಟಲ್ ಜೀವನ ಪ್ರಮಾಣ ಪತ್ರಗಳ ವ್ಯವಸ್ಥೆ ಮಾಡಲು 70 ರೂಪಾಯಿಗಳ ಶುಲ್ಕ ವಿಧಿಸಲಾಗುತ್ತದೆ.
ಕೇಂದ್ರ ಸರ್ಕಾರ/ರಾಜ್ಯ ಸರ್ಕಾರಿ/ ಪಿಎಸ್ ಯು/ ಪಿಎಸ್ ಬಿ ಹಾಗೂ ಇತರೆ ಸರ್ಕಾರಿ ಕಚೇರಿಗಳ ನಿವೃತ್ತ ನೌಕರರಿಗೆ ಈ ಸೇವೆಯಿಂದ ಅನುಕೂಲವಾಗಲಿದೆ.