ನವದೆಹಲಿ: ವೈದ್ಯಕೀಯ ಪ್ರಯೋಗಗಳಲ್ಲಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎನ್ನಲಾಗಿರುವ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಿರುವ ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡರ್ನ ಸಂಸ್ಥೆಯೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಕೋವಿಡ್- ಲಸಿಕೆಯ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳ ಅಧ್ಯಯನಕ್ಕಾಗಿ ಸ್ವತಂತ್ರ ರಾಷ್ಟ್ರೀಯ ಆರೋಗ್ಯ ರಚಿಸಿರುವ ದತ್ತಾಂಶ ಸುರಕ್ಷತಾ ಮಾನಿಟರಿಂಗ್ ಮಂಡಳಿ (ಡಿಎಸ್‍ಎಂಬಿ) ಸೋಮವಾರ, ಲಸಿಕೆ 94.5 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಕಂಡುಹಿಡಿದಿದೆ ಎಂದು ಮಾಡರ್ನ ಸಂಸ್ಥೆ ತಿಳಿಸಿದೆ.
ಕೋವಿಡ್ - ಲಸಿಕೆಯ ಕ್ಲಿನಿಕಲ್ ಪ್ರಯೋಗದ ಬಗ್ಗೆ ಮಾಡರ್ನ ಸಂಸ್ಥೆಯೊಂದಿಗೆ ಮಾತ್ರವಲ್ಲದೇ, ಫಿಜರ್, ಸೀರಮ್ ಇನ್ಸಿಟ್ಯೂಟ್, ಭಾರತ್ ಬಯೋಟೆಕ್ ಮತ್ತು ಜಿಡಸ್ ಕ್ಯಾಡಿಲಾ ಸಂಸ್ಥೆಗಳೊಂದಿಗೆ ಲಸಿಕೆಯ ಸುರಕ್ಷತೆ, ರೋಗ ನಿರೋಧಕ ಶಕ್ತಿ ವೃದ್ಧಿ, ದಕ್ಷತೆ , ನಿಯಂತ್ರಣ ಕುರಿತಂತೆ ಮಾತುಕತೆ ನಡೆಸುತ್ತಿರುವುದಾಗಿ ಮೂಲಗಳು ಹೇಳಿವೆ.
ಹೊಸ ಔಷಧಿ ಮತ್ತು ಕಾಸ್ ಮೆಟಿಕ್ಸ್ ನಿಯಮ 2019ರ ಪ್ರಕಾರ, ಯಾವುದೇ ಔಷಧ ಅಥವಾ ಲಸಿಕೆಯನ್ನು ಪರೀಕ್ಷಿಸಿದರೆ ಮತ್ತು ಭಾರತದ ಹೊರಗೆ ನಿಯಂತ್ರಣದ ಅನುಮೋದನೆ ಪಡೆದರೆ, ಇಲ್ಲಿ ಅದರ ಸುರಕ್ಷತೆ ನಿಯಂತ್ರಣದ ಬಗ್ಗೆ ಅನುಮೋದನೆಗಾಗಿ ಎರಡು ಹಾಗೂ ಮೂರನೇ ಹಂತದ ಅಧ್ಯಯನಕ್ಕಾಗಿ ಸಮನ್ವಯತೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಕೋವಿಡ್-19 ನಿಯಂತ್ರಣದಲ್ಲಿ ತಾವು ಅಭಿವೃದ್ಧಿಪಡಿಸಿರುವ ಲಸಿಕೆ ಶೇ. 90 ರಷ್ಟು ಪರಿಣಾಮಕಾರಿಯಾಗಿದೆ ಎಂದು ಫಿಜರ್ ಮತ್ತು ಬಯೋಟೆಕ್ ಸಂಸ್ಥೆಗಳು ಹೇಳಿದ ಒಂದು ವಾರದೊಳಗೆ ಕೆಂಬ್ರಿಡ್ಡ್ - ಮೆಸಾಚೂಸೆಟ್ಸ್ ಮೂಲದ ಮಾಡರ್ನ ಸಂಸ್ಥೆ , ಕೋವಿಡ್-19 ಲಸಿಕೆ ಅಭಿವೃದ್ಧಿ ಬಗ್ಗೆ ಘೋಷಣೆ ಮಾಡಿದ್ದು, ಅಧಿಕೃತತೆಗಾಗಿ ಜಾಗತಿಕ ನಿಯಂತ್ರಣ ಏಜೆನ್ಸಿಗಳಿಗೆ ಅರ್ಜಿಸಲ್ಲಿಸಲು ಯೋಜನೆ ಮಾಡಿಕೊಂಡಿದೆ.