ನವದೆಹಲಿ: ಜಾಗತಿಕ ಮಟ್ಟದಲ್ಲೂ ಷೇರುಪೇಟೆ ಏರಿಕೆಯ ಹಾದಿಯಲ್ಲಿದ್ದು, ಭಾರತೀಯ ಷೇರುಪೇಟೆಯೂ ಇದರ ಪ್ರಭಾವಕ್ಕೆ ಒಳಗಾಗಿತ್ತು. ಸೋಮವಾರದ ವಹಿವಾಟಿನಲ್ಲಿ ಭಾರತೀಯ ಷೇರುಪೇಟೆ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿತ್ತು!
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 704.37 ಅಂಶ (1.68%) ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟ 42,597.43 ಅಂಶದಲ್ಲಿ ವಹಿವಾಟು ಕೊನೆಗೊಳಿಸಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಇದು ಸಾರ್ವಕಾಲಿಕ 42,645.33 ತಲುಪಿತ್ತು. ಇದೇ ರೀತಿ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ ಕೂಡ ಮಧ್ಯಂತರದ ವಹಿವಾಟಿನಲ್ಲಿ 12,474.05 ಅಂಶ ತಲುಪಿದ್ದು, ದಿನದ ವಹಿವಾಟಿನ ಕೊನೆಗೆ 197.50 ಅಂಶ (1.61%) ಏರಿಕೆಯೊಂದಿಗೆ 12,461.05ರಲ್ಲಿ ವಹಿವಾಟು ಮುಗಿಸಿದೆ.
ಈ ವಿದ್ಯಮಾನದ ಕಾರಣ ಇಂದು ಷೇರುಪೇಟೆಯಲ್ಲಿ ಬಿಎಸ್ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ 1,65,67,257.92 ಲಕ್ಷ ಕೋಟಿ ರೂಪಾಯಿಯಿಂದ 2,06,558.75 ಲಕ್ಷ ಕೋಟಿ ರೂಪಾಯಿಗೆ ತಲುಪಿತು. ಸೆನ್ಸೆಕ್ಸ್ ಪಟ್ಟಿಯಲ್ಲಿ 30 ಕಂಪನಿಗಳ ಷೇರುಗಳ ಪೈಕಿ 28 ಕಂಪನಿಗಳ ಷೇರು ಲಾಭಾಂಶದೊಂದಿಗೆ ದಿನದ ವಹಿವಾಟು ಮುಗಿಸಿವೆ. ಈ ಪೈಕಿ ಇಂಡಸ್ಇಂಡ್ ಬ್ಯಾಂಕ್ ಷೇರು ಗರಿಷ್ಠ 4.95 ಲಾಭಾಂಶ ಗಳಿಸಿದೆ.