ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು 2024ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ರಾಷ್ಟ್ರದಾದ್ಯಂತ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ನೂರು ದಿನಗಳ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ.
ಬಿಹಾರ ಚುನಾವಣೆ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಚ್ಚುಗೆಗೆ ಪಾತ್ರವಾಗಿರುವ ನಡ್ಡಾ, 'ರಾಷ್ಟ್ರೀಯ ವಿಸ್ತ್ರಿತ್ ಪ್ರವಾಸ್' ಹೆಸರಿನಲ್ಲಿ ಶೀಘ್ರದಲ್ಲೇ ರಾಷ್ಟ್ರದಾದ್ಯಂತ ಸಂಚರಿಸಲಿದ್ದಾರೆ. 2019ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳನ್ನು ಗಮನದಲ್ಲಿರಿಸಿ ಕಾರ್ಯತಂತ್ರ ರೂಪಿಸುವುದು ಈ ಪ್ರವಾಸದ ಉದ್ದೇಶ ಎನ್ನಲಾಗುತ್ತಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಕಳೆದ ಬಾರಿ (2015 ರಲ್ಲಿ) ನಡೆದ ಚುನಾವಣೆಯಲ್ಲಿ 53 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 74ರಲ್ಲಿ ಗೆಲುವು ಸಾಧಿಸಿದೆ.
ಪಕ್ಷದ ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುವುದು. ಪಕ್ಷದ ಚಟುವಟಿಕೆಗಳ ಬಗ್ಗೆ ವಿವರವಾದ ವರದಿ ನೀಡುವುದು, ಏಕರೂಪತೆಯನ್ನು ತರುವುದು ಹಾಗೂ ದೇಶವನ್ನು ಸದೃಢಗೊಳಿಸುವ ಸಲುವಾಗಿ ಪಕ್ಷದ ಹೆಚ್ಚೆಗುರುತನ್ನು ಎಲ್ಲೆಡೆ ಮೂಡಿಸುವುದು ಈ ಪ್ರವಾಸದ ಉದ್ದೇಶವೆಂದು ಪಕ್ಷದ ಮೂಲಗಳು ತಿಳಿಸಿವೆ.
ಕೋವಿಡ್-19 ಸೋಂಕು ಹರಡುತ್ತಿರುವುದನ್ನು ಪರಿಗಣಿಸಿ ವಿವಿಧ ರಾಜ್ಯಗಳಲ್ಲಿ ಸಭೆ ನಡೆಯುವ ಸಂದರ್ಭ 200ಕ್ಕಿಂತ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಬೇಕು ಎಂದು ನಾಯಕರಿಗೆ ಮನವಿ ಮಾಡಲಾಗಿದೆ.
ನಡ್ಡಾ ಅವರು ಭೇಟಿ ನೀಡಲಿರುವ ರಾಜ್ಯಗಳನ್ನು ಎ, ಬಿ, ಸಿ ಮತ್ತು ಡಿ ವರ್ಗಗಳಾಗಿ ವಿಭಾಗಿಸಲಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳನ್ನು 'ಎ' ಕೆಟಗರಿಯಲ್ಲಿ ಸೇರಿಸಲಾಗಿದೆ. ಕರ್ನಾಟಕ, ನಾಗಲ್ಯಾಂಡ್, ಬಿಹಾರ, ತ್ರಿಪುರದಂತಹ ರಾಜ್ಯಗಳು ಈ ಪಟ್ಟಿಯಲ್ಲಿವೆ. ಬಿಜೆಪಿ ಅಧಿಕಾರದಲ್ಲಿಲ್ಲದ ರಾಜಸ್ಥಾನ, ಛತ್ತೀಸಗಡ, ಮಹಾರಾಷ್ಟ್ರ, ದೆಹಲಿಯಂತಹ ರಾಜ್ಯಗಳನ್ನು 'ಬಿ' ಕೆಟಗರಿಯಲ್ಲಿರಿಸಲಾಗಿದೆ.
'ಸಿ' ಕೆಟಗರಿಯಲ್ಲಿ ಲಕ್ಷದ್ವೀಪ, ಮೇಘಾಲಯ, ಮಿಜೋರಾಂನಂತಹ ಸಣ್ಣ ರಾಜ್ಯಗಳನ್ನು ಸೇರಿಸಲಾಗಿದೆ. ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಇನ್ನೂ ಕೆಲವು ರಾಜ್ಯಗಳು 'ಡಿ' ಕೆಟಗರಿಯಲ್ಲಿವೆ.