ನವದೆಹಲಿ: 2025-26ರವರೆಗೂ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳ ಪ್ರಸಾರಕ್ಕೆ ಭಾರತದ ಹಕ್ಕನ್ನು ಪಡೆದುಕೊಂಡಿರುವುದಾಗಿ ಅಮೆಜಾನ್ ಪ್ರೈಮ್ ವಿಡಿಯೋ ಮಂಗಳವಾರ ತಿಳಿಸಿದೆ.
ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನಡುವೆ ಬಹು ವರ್ಷದ ಒಪ್ಪಂದವೇರ್ಪಟ್ಟಿದ್ದು, ನ್ಯೂಜಿಲೆಂಡ್ ನಲ್ಲಿ 2021ರ ನಂತರ ಆರಂಭವಾಗಲಿರುವ ಪುರುಷ, ಮಹಿಳೆಯರ ಟೆಸ್ಟ್, ಏಕದಿನ, ಟಿ-20 ಪಂದ್ಯಗಳ ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ ಪ್ರಮುಖ ಕ್ರಿಕೆಟ್ ಮಂಡಳಿಯಿಂದ ವಿಶೇಷ ಲೈವ್ ಕ್ರಿಕೆಟ್ ಹಕ್ಕುಗಳನ್ನು ಪಡೆದ ಮೊದಲ ಭಾರತೀಯ ಸ್ಟ್ರೀಮಿಂಗ್ ಸೇವೆಯಾಗಿದೆ ಎಂದು ಹೇಳಿದೆ.
2022ರಲ್ಲಿ ಆರಂಭವಾಗಲಿರುವ ಟೀಂ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸ ಮತ್ತು ಎರಡನೇ ಪ್ರವಾಸಕ್ಕೂ ಈ ಒಪ್ಪಂದ ಅನ್ವಯವಾಗಲಿದೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ 2020-2021ರ ಋತುವಿನ ಹಕ್ಕುಗಳನ್ನು ಅಮೆಜಾನ್ ಪಡೆಯಲು ಉದ್ದೇಶಿಸಿರುವುದಾಗಿ ತಿಳಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ, ಅಮೆಜಾನ್ ಪ್ರೈಮ್ ವಿಡಿಯೋ ಭಾರತದಲ್ಲಿ ವಿಶ್ವ ದರ್ಜೆಯ ಮನರಂಜನೆಯ ತಾಣವಾಗಿದೆ ಎಂದು ಅಮೆಜಾನ್ ಪ್ರೈಮ್ ವಿಡಿಯೋ ನಿರ್ದೇಶಕ ಮತ್ತು ದೇಶದ ಜನರಲ್ ಮ್ಯಾನೇಜರ್ ಗೌರವ್ ಗಾಂಧಿ ಹೇಳಿದ್ದಾರೆ.