: ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕೆ.ಸುರೇಂದ್ರನ್ ಅವರ ಅಧ್ಯಕ್ಷ ಸ್ಥಾನ ಅಷ್ಟು ಸುಲಲಿತವಾಗಿ ಇರಲಾರದೆಂದು ಈ ಹಿಂದೆಯೇ ರಾಜಕೀಯ ವೀಕ್ಷಕರು ಹೇಳಿದ್ದು ಇದೀಗ ಹೌದಲ್ವೇ ಎನ್ನುವಲ್ಲಿಗೆ ಬಂದು ತಲಪಿರುವುದು ವಿಶೇಷವೆ!. ಸುರೇಂದ್ರನ್ ಅವರು ಪಕ್ಷದ ಹೊರಗಿನ ಶತ್ರುಗಳಿಗಿಂತ ಹೆಚ್ಚು 'ಸ್ನೇಹಿತರನ್ನು' ಎದುರಿಸಲಿದ್ದಾರೆ ಎಂಬ ವಿಶ್ಲೇಷಣಾ ವರದಿಗಳೂ ಬಂದಿದ್ದವು. ರಾಜ್ಯ ಬಿಜೆಪಿ ಘಟಕವು ಪ್ರಸ್ತುತ ಇಂತಹ ಅವಲೋಕನಗಳನ್ನು ದೃಢಪಡಿಸುವತ್ತ ಸಾಗುತ್ತಿದೆ. ರಾಜ್ಯ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್ ಮತ್ತು ರಾಷ್ಟ್ರೀಯ ಪರಿಷತ್ ಸದಸ್ಯ ಪಿ.ಎಂ.ವೇಲಾಯುಧನ್ ಅವರ ಬಳಿಕ 24 ರಾಜ್ಯ ನಾಯಕರು ಸಹ ಕೆ.ಸುರೇಂದ್ರನ್ ವಿರುದ್ದ ಸಹಿ ಮಾಡಿದ ಮನವಿಯನ್ನು ಕೇಂದ್ರ ನಾಯಕತ್ವಕ್ಕೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
2018 ರ 'ಲಾಸ್ಟ್' ಅಧ್ಯಕ್ಷ ಸ್ಥಾನ:
ಕೆ.ಸುರೇಂದ್ರನ್ ಕಾರ್ಯಕರ್ತರಿಗೆ ಅಚ್ಚುಮೆಚ್ಚಿನವರಾಗಿದ್ದರೂ ಪಕ್ಷದ ಒಂದು ಭಾಗ ವಿಭಾಗ ಅವರ ವಿರುದ್ದವಾಗಿರುವುದು ಗುಟ್ಟಿನ ವಿಷಯವೇನೂ ಅಲ್ಲ. ನಿಕಟಪೂರ್ವ ಅಧ್ಯಕ್ಷರಾಗಿದ್ದ ಕುಮ್ಮನಂ ರಾಜಶೇಖರನ್ ಅವರು ಮೇ 2018 ರಲ್ಲಿ ಮಿಜೋರಾಂ ರಾಜ್ಯಪಾಲರಾದಾಗ ಆ ಸ್ಥಾನಕ್ಕೆ ಸುರೇಂದ್ರನ್ ಆಯ್ಕೆಯಾಗುವರೆಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಆರ್‍ಎಸ್‍ಎಸ್ ನಿರ್ಧಾರವನ್ನು ಕೃಷ್ಣದಾಸ್ ಬಣ ವಿರೋಧಿಸಿದ್ದರಿಂದ ಶ್ರೀಧರನ್ ಪಿಳ್ಳೈ ರಾಜ್ಯ ಅಧ್ಯಕ್ಷರಾದರು.
ಅಧ್ಯಕ್ಷರಿಲ್ಲದೆ ನಾಲ್ಕು ತಿಂಗಳ ರಾಜ್ಯ ಬಿಜೆಪಿ:
ಶ್ರೀಧರನ್ ಪಿಳ್ಳೈ ಅವರು 2019 ರ ಅಕ್ಟೋಬರ್‍ನಲ್ಲಿ ಮಿಜೋರಾಂ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಾಗ, ಸುರೇಂದ್ರನ್ ಅಧ್ಯಕ್ಷರಾಗಲಿದ್ದಾರೆ ಎಂಬ ವರದಿಗಳು ಬಂದವು. ಆದರೆ ಗುಂಪುಗಾರಿಕೆಯ ತಿಕ್ಕಾಟ ಮತ್ತು ಭಿನ್ನಾಭಿಪ್ರಾಯಗಳು ಕೇಂದ್ರ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿ ಬಿಜೆಪಿ ರಾಜ್ಯ ಅಧ್ಯಕ್ಷರ ಸ್ಥಾನ ಸುಮಾರು ನಾಲ್ಕು ತಿಂಗಳುಗಳ ಕಾಲ ಖಾಲಿಯಾಗಿತ್ತು. ಏತನ್ಮಧ್ಯೆ, ಎಂ.ಟಿ.ರಮೇಶ್, ಶೋಭಾ ಸುರೇಂದ್ರನ್ ಮತ್ತು ಕುಮ್ಮನಂ ಅವರ ಹೆಸರುಗಳನ್ನು ಸುರೇಂದ್ರ ಜೊತೆಗೆ ರಾಜ್ಯ ಅಧ್ಯಕ್ಷ ಹುದ್ದೆಯೊಂದಿಗೆ ಕೇಳಿಬಂದವು. ಆದರೆ 2020 ಫೆಬ್ರವರಿ ಯಲ್ಲಿ ಕೆ.ಸುರೇಂದ್ರನ್ ಅವರು ರಾಜ್ಯದ ಅತ್ಯಂತ ಕಿರಿಯ ಬಿಜೆಪಿ ಅಧ್ಯಕ್ಷ ಹುದ್ದೆಯನ್ನು ಕೊನೆಗೂ ಅಲಂಕರಿಸಿದರು.
ಮತ್ತೆ ವಿವಾದ:
ರಾಜಕೀಯವಾಗಿ ತನ್ನನ್ನು ಮೂಲೆಗುಂಪಾಗಿಸುವ ಪ್ರಯತ್ನ ನಡೆದಿದೆ ಎಂದು ಶೋಭಾ ಸುರೇಂದ್ರನ್ ಅವರ ದೂರು ಸಾರ್ವಜನಿಕವಾಗಿ ಹೊರಬೀಳುತ್ತಿರುವಂತೆ ರಾಜ್ಯ ಬಿಜೆಪಿಯಲ್ಲಿನ ವಿವಾದ ಮತ್ತೆ ವಿವಾದಕ್ಕೆಡೆಯಾಗಿದೆ. ಶೋಭಾ ಸುರೇಂದ್ರನ್ ಅವರು ಬಿಜೆಪಿ ಕೇಂದ್ರ ನಾಯಕತ್ವಕ್ಕೆ ದೂರು ನೀಡಿದ್ದಾರೆ. ಸುರೇಂದ್ರನ್ ಅಧ್ಯಕ್ಷರಾದ ಬಳಿಕ ನಿರ್ಲಕ್ಷಿತರನ್ನು ಒಂದುಗೂಡಿಸಲು ಶೋಭಾ ಸುರೇಂದ್ರನ್ ಗುಂಪನ್ನು ರಚಿಸಿದ್ದಾರೆ ಎಂಬ ಸುದ್ದಿ ಗೌಪ್ಯವೇನೂ ಅಲ್ಲ. ವಿವಾದ ಚರ್ಚೆಯಾಗುತ್ತಿರುವ ಮಧ್ಯೆ ಶೋಭಾ ಅವರು ಕೇಂದ್ರಕ್ಕೆ ಪತ್ರ ಬರೆದಿರುವುದು ಜ್ವಾಲೆಗೆ ತೈಲ ಎರೆದಂತಾಗಿದೆ.
24 ನಾಯಕರ ದೂರು:
ಶೋಭಾ ಸುರೇಂದ್ರನ್ ಮತ್ತು ಪಿಎಂ ವೇಲಾಯುಧನ್ ಅವರ ಬೆನ್ನಿಗೆ ಇದೀಗ 24 ಬಿಜೆಪಿ ಮುಖಂಡರು ಕೇಂದ್ರಕ್ಕೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಬಿಜೆಪಿ ಘಟಕದಲ್ಲಿ ಪಕ್ಷದ ಯಾವುದೇ ಚಟುವಟಿಕೆಗಳಿಲ್ಲ. ಅದು ರಾಜ್ಯ ಅಧ್ಯಕ್ಷರ ನೇತೃತ್ವದ ಗುಂಪು ಚಟುವಟಿಕೆಯಾಗಿದೆ ಎಂಬುದು ಅವರು ಉಲ್ಲೇಖಿಸಿರುವ ಟೀಕೆಯಾಗಿದೆ. ಈ ರೀತಿ ಮುಂದುವರಿದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನಾಯಕರು ಕೇಂದ್ರಕ್ಕೆ ತಿಳಿಸಿದ್ದಾರೆ.
ಒಟ್ಟಾಗಿ ನಾವು ಸ್ಥಳೀಯ ಚುನಾವಣೆಯಲ್ಲಿ ಗೆಲ್ಲುತ್ತೇವೆ:
ವರದಿಯೊಂದರ ಅನುಸಾರ ರಾಜ್ಯದ ಬಿಜೆಪಿ ಮುಖಂಡರು ಕೇಂದ್ರಕ್ಕೆ ದೂರು ನೀಡಿದ್ದು, ಎಲ್ಲ ನಾಯಕರನ್ನು ಒಟ್ಟಿಗೆ ಕರೆದೊಯ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಶೇಕಡಾ 70 ರಷ್ಟು ಪಂಚಾಯಿತಿಗಳಲ್ಲಿ ಬಿಜೆಪಿಗೆ ಪ್ರಾತಿನಿಧ್ಯವಿದೆ ಮತ್ತು ತಿರುವನಂತಪುರ ನಿಗಮ ಮತ್ತು ಹಲವಾರು ಪುರಸಭೆಗಳಲ್ಲಿ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳ ಅಂಕೆ-ಸಂಖ್ಯೆಗಳನ್ನು ಉಲ್ಲೇಖಿಸಿ ಅವರು ಈ ಸಾಧ್ಯತೆಯನ್ನು ಕೇಂದ್ರಕ್ಕೆ ತಿಳಿಸಿದ್ದಾರೆ.
ಸುರೇಂದ್ರನ್ ಹೊರಗುಳಿಯಲಿದ್ದಾರೆಯೇ?:
ಕೇರಳ ಬಿಜೆಪಿಯಲ್ಲಿನ ನಾಯಕತ್ವ ವಿವಾದ ಯಾವಾಗಲೂ ಕೇಂದ್ರಕ್ಕೆ ತಲೆನೋವಾಗಿಯೇ ಸಾಗಿಬಂದಿದೆ. ಅಧ್ಯಕ್ಷ ಕೆ.ಸುರೇಂದ್ರನ್ ಮೂಲಕ ರಾಜ್ಯದಲ್ಲಿ ಬಿಜೆಪಿಯ ಹೊಸ ಅಲೆಯ ಭರವಸೆ ಹಿಮ್ಮೆಟ್ಟಿದೆ ಎಂದು ಪ್ರಸ್ತುತ ಪರಿಸ್ಥಿತಿ ಬೊಟ್ಟುಮಾಡುತ್ತಿದೆ. ಈ ಹಿಂದೆ ಸುರೇಂದ್ರನ್ ಅವರನ್ನು ಉಚ್ಚಾಟಿಸಿದರೆ ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಧರನ್ ಪಿಳ್ಳೈ ಅವರ ನಿರ್ಗಮನ ಸಂದರ್ಭದ ಪರಿಸ್ಥಿತಿ ಬಹುತೇಕ ಮರುಕಳಿಸಲಿದೆ ಎನ್ನಲಾಗಿದೆ. ರಾಜ್ಯ ನಾಯಕತ್ವವು ವಿವಾದಗಳನ್ನು ಪರಿಹರಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆ ಎದುರಿಸಲು ಸಾಧ್ಯವಾಗುವ ಭರವಸೆ ಇದ್ದಲ್ಲಿ ಸುರೇಂದ್ರನ್ ಅವರನ್ನು ಬದಲಿಸಿ ಕೇಂದ್ರವು ಇನ್ನೊಬ್ಬ ನಾಯಕನನ್ನು ಪರಿಗಣಿಸುವ ಸಾಧ್ಯತೆಯಿದೆ. ಆದರೆ ಗುಂಪು ವಿವಾದಗಳು ಮತ್ತು ನಾಯಕರ ಭಿನ್ನಾಭಿಪ್ರಾಯಗಳು ಮುಂದುವರಿದರೆ ನಾಯಕತ್ವದ ಬದಲಾವಣೆಯು ಮಾತ್ರ ಫಲ ನೀಡುತ್ತದೆಯೇ ಎಂದು ನೋಡಬೇಕಾಗಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಗಳು ಬರಲಿದ್ದು, ಕೇರಳದ ರಾಜಕೀಯ ನಡೆಗಳನ್ನು, ರಾಜ್ಯ ಬಿಜೆಪಿಯಲ್ಲಿನ ಸಮಸ್ಯೆಗಳನ್ನು ಜನಸಾಮಾನ್ಯರು ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನುವುದೂ ಕುತೂಹಲಕರವಾಗಿದೆ.