ಚೆನ್ನೈ: 26 ವರ್ಷದ ಖಾಸಗಿ ಸುದ್ದಿವಾಹಿನಿ ವರದಿಗಾರರೊಬ್ಬರನ್ನು ಭಾನುವಾರ ತಡರಾತ್ರಿ ಚೆನ್ನೈನ ಹೊರವಲಯದಲ್ಲಿ ಮೂವರು ದುಷ್ಕರ್ಮಿಗಳ ತಂಡವೊಂದು ಕೊಲೆ ಮಾಡಿದೆ.
ಭೂಮಿಯ ಅಕ್ರಮ ಮಾರಾಟದ ಬಗ್ಗೆ ವರದಿ ಮಾಡಿದ್ದಕ್ಕಾಗಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.
'ಖಾಸಗಿ ಸುದ್ದಿವಾಹಿನಿಯಲ್ಲಿ ಶ್ರೀಪೆರುಂಬುದೂರಿನ ವರದಿಗಾರರಾಗಿ ಜಿ.ಮೋಸೆಸ್ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ 10.30ರ ಸುಮಾರಿಗೆ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಕರೆಯೊಂದು ಬಂದಿತು. ಕರೆ ಮಾಡಿದ ವ್ಯಕ್ತಿ ಅವರಿಗೆ ಹೊರಬರಲು ಹೇಳಿದ. ಮನೆಯಿಂದ ಹೊರಹೋದ 10 ನಿಮಿಷದ ಬಳಿಕ ಸಹಾಯಕ್ಕಾಗಿ ಮೋಸೆಸ್ ಕೂಗುತ್ತಿರುವುದು ಕೇಳಿಬಂದಿತು. ಆಗ ನಾನು ಮನೆಯಿಂದ ಹೊರಬಂದೆ. ಅಷ್ಟಾರಲ್ಲಾಗಲೇ ಅವರಿಗೆ ಚುಚ್ಚಲಾಗಿತ್ತು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಕೊನೆಯುಸಿರೆಳೆದರು' ಎಂದು ವೃತ್ತಿಯಲ್ಲಿ ಪತ್ರಕರ್ತರಾಗಿರುವ ಮೋಸೆಸ್ ತಂದೆ ಮಾಹಿತಿ ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಘಟನೆಯನ್ನು ಖಂಡಿಸಿದ್ದಾರೆ.