ಹೊಸದಿಲ್ಲಿ: ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಹಾವಳಿಯು ತಮ್ಮ ವರಮಾನದ ಮೇಲೆ ಅಗಾಧವಾದ ಹೊಡೆತವನ್ನು ನೀಡಿರುವ ಕಾರಣ, ರಾಜ್ಯ ಸರಕಾರಗಳು ತಮ್ಮ ಒಟ್ಟು ಬಂಡವಾಳ ವೆಚ್ಚವನ್ನು 2.5 ಲಕ್ಷ ಕೋಟಿ ರೂ.ಗಳಿಂದ 2.7 ಲಕ್ಷ ಕೋಟಿ ರೂ.ಗೆ ಇಳಿಸುವ ನಿರೀಕ್ಷೆಯಿದೆಯೆಂದು ರೇಟಿಂಗ್ ಸಂಸ್ಥೆ ಐಸಿಆರ್‌ಎ ಬುಧವಾರ ತಿಳಿಸಿದೆ.
2021ರ ಮಾರ್ಚ್ ವೇಳೆಗೆ ರಾಜ್ಯಗಳ ಸಾಲದ ಮಟ್ಟಗಳು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 28.9 ಶೇಕಡಕ್ಕೆ ಕುಸಿಯುವ ಸಾಧ್ಯತೆಯಿದೆಯೆಂದು ಅದು ಎಚ್ಚರಿಕೆ ನೀಡಿದೆ. 2018-19ನೇ ಸಾಲಿನಲ್ಲಿ ಸಾಲದ ಮಟ್ಟಗಳು ಒಟ್ಟು ಜಿಡಿಪಿಯ 2.19 ಶೇಕಡದಷ್ಟಿದ್ದರೆ, 2019-20ರಲ್ಲಿ ಅಂದಾಜು 22.3 ಶೇಕಡ ಆಗಿತ್ತು.
ಸಮೀಕ್ಷೆಯಲ್ಲಿ ಪಾಲ್ಗೊಂಡ ರಾಜ್ಯಗಳಲ್ಲಿ 12 ದೊಡ್ಡ ಗಾತ್ರದ್ದಾಗಿದ್ದು, ಅವುಗಳ ಸಂಯೋಜಿತ ಜಿಡಿಪಿಯು 2019-20 ರ ಸಾಲಿನ ಸಂಯೋಜಿತ ಜಿಡಿಪಿ ಮೂರನೇ ಎರಡರಷ್ಟು ಮಾತ್ರವೇ ಆಗಿದೆ ಎಂದು ಐಸಿಆರ್‌ಎ ತಿಳಿಸಿದೆ.
'' ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊರೋನ ಹಾವಳಿಯು ರಾಜ್ಯ ಸರಕಾರಗಳ ಆದಾಯದ ಮೇಲೆ ತೀವ್ರವಾದ ಆಘಾತವನ್ನುಂಟು ಮಾಡಿದೆ'' ಎಂದು ಐಸಿಆರ್‌ಎನ ಕಾರ್ಪೊರೇಟ್ ವಲಯದ ರೇಟಿಂಗ್ ಏಜೆನ್ಸಿ ವಿಭಾಗದ ಮುಖ್ಯಸ್ಥ ಜಯಂತ ರಾಯ್ ತಿಳಿಸಿದ್ದಾರೆ. ಐಸಿಆರ್‌ಎ, ಜಾಗತಿಕ ಆರ್ಥಿಕ ರೇಟಿಂಗ್ ಏಜೆನ್ಸಿ ಮೂಡಿಸ್ ಇನ್‌ವೆಸ್ಟರ್ಸ್ ಸರ್ವೀಸ್‌ನ ಭಾರತೀಯ ಘಟಕವಾಗಿದೆ. ಕೇಂದ್ರ ಸರಕಾರವು ಬಹುತೇಕ ತೆರಿಗೆಗಳನ್ನು ಸಂಗ್ರಹಿಸುತ್ತಿದೆಯಾದರೂ ಶಿಕ್ಷಣ, ಆರೋಗ್ಯಪಾಲನೆ, ಕಾನೂನು ಮತ್ತು ಶಿಸ್ತು ಸೇರಿದಂತೆ ಹಲವಾರು ವಿಷಯಗಳಲ್ಲಿ ರಾಜ್ಯಗಳೇ ಹೆಚ್ಚು ಹಣವನ್ನು ವ್ಯಯಿಸಬೇಕಾಗಿದೆ.
ರಾಜ್ಯಗಳ ಆದಾಯವು ಗಣನೀಯವಾಗಿ ಕುಸಿದಿರುವುದರಿಂದ ಅವರು ಪಡೆದ ಹೆಚ್ಚು ಸಾಲದ ಹಣವು, ಆದಾಯ ಕೊರತೆಯನ್ನು ತುಂಬಿಸುವುದಕ್ಕೆ ವಿನಿಯೋಗವಾಗುತ್ತದೆ ಎಂದು ರಾಯ್ ತಿಳಿಸಿದ್ದಾರೆ.