ನವದೆಹಲಿ: ಭೂತಾನ್ ಕಾರ್ಡ್'ಗಳನ್ನು ಹೊಂದಿರುವವರು ಭಾರತದಲ್ಲಿ ರುಪೇ ನೆಟ್‌ವರ್ಕ್ ಪ್ರವೇಶಿಸಲು ಅನುವು ಮಾಡಿಕೊಡುವ ರುಪೇ ಕಾರ್ಡ್ ಹಂತ-2ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭೂತಾನ್ ಪ್ರಧಾನಿ ಲೋತಾಯ್ ತ್ಸೆರಿಂಗ್ ಅವರು ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟನೆ ಮಾಡಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಭೂತಾನ್'ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ರುಪೇ ಕಾರ್ಡ್ ಹಂತ-1ನ್ನು ಉದ್ಘಾಟನೆ ಮಾಡಿದ್ದರು.
ರುಪೇ ಕಾರ್ಡ್ ಹಂತ-2ನ್ನು ಪ್ರಧಾನಿ ಮೋದಿ ಹಾಗೂ ಭೂತಾನ್ ಪ್ರಧಾನಮಂತ್ರಿಗಳು ಜಂಟಿಯಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಭುತಾನ್‌ನಲ್ಲಿ ರುಪೇ ಕಾರ್ಡ್ ಹಂತ-2ನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಭಾರತ-ಭೂತಾನ್ ನಡುವಿನ ಸಾವಿರಾರು ವರ್ಷಗಳ ರಾಜತಾಂತ್ರಿಕ ಹಾಗೂ ಸಾಂಸ್ಕೃತಿಕ ಸಂಬಂಧ ಎರಡೂ ರಾಷ್ಟ್ರಗಳನ್ನು ಸದಾಕಾಲ ಒಟ್ಟಿಗೆ ಮುನ್ನಡೆಯುವಂತೆ ಪ್ರೇರೇಪಿಸುತ್ತವೆ. ಭಾರತ, ಭೂತಾನ್ ಸಂಬಂಧ ಅತ್ಯಂತ ಗಟ್ಟಿಯಾದುದು. ಮುಂದಿನ ವರ್ಷ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಹಾಯದೊಂದಿಗೆ ಭೂತಾನ್ ತನ್ನ ಮೊದಲ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದಕ್ಕಾಗಿ ಭೂತಾನ್ ರಾಷ್ಟ್ರದ ನಾಲ್ವರು ಬಾಹ್ಯಾಕಾಶ ಎಂಜಿನಿಯರ್'ಗಳು ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆಂದು ಹೇಳಿದ್ದಾರೆ.
ಭೂತಾನ್'ನ ಬಾಹ್ಯಾಕಾಶ ಯೋಜನೆ ಕ್ಷಿಪ್ರಗತಿಯಲ್ಲಿ ಮುಂದುವರೆಯುತ್ತಿರುವುದು ಸಂತಸ ತಂದಿದೆ. COVID-19 ಸಾಂಕ್ರಾಮಿಕ ರೋಗದ ಈ ಕಷ್ಟದ ಸಮಯದಲ್ಲಿ ಭಾರತವು ಭೂತಾನ್‌ನೊಂದಿಗೆ ನಿಲ್ಲಲಿದೆ. ನೆರೆಯ ರಾಷ್ಟ್ರದ ಅವಶ್ಯಕತೆಗಳನ್ನು ಪೂರೈಸುವುದು, ಭಾರತದ ಮೊದಲ ಆದ್ಯತೆಯಾಗಿರುತ್ತದೆ.
ಭೂತಾನ್‌ನಲ್ಲಿ ರುಪೇ ಕಾರ್ಡ್‌ಗಳ ಹಂತ -1 ರ ಬಿಡುಗಡೆಯು ಭಾರತದ ಪ್ರವಾಸಿಗರಿಗೆ ಭೂತಾನ್‌ನಾದ್ಯಂತ ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್‌ಗಳನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ.
ಎರಡನೇ ಹಂತವು ಇದೀಗ ಭೂತಾನ್ ಕಾರ್ಡ್ ಹೊಂದಿರುವವರಿಗೆ ಭಾರತದಲ್ಲಿ ರುಪೇ ನೆಟ್‌ವರ್ಕ್ ಪ್ರವೇಶಿಸಲು ಅವಕಾಶ ನೀಡುತ್ತದೆ ಎಂದು ತಿಳಿಸಿದ್ದಾರೆ.
ರುಪೇ ಕಾರ್ಡ್ ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಜಾಲವಾಗಿದ್ದು, ಎಟಿಎಂಗಳು, ಪಿಒಎಸ್ ಸಾಧನಗಳು ಮತ್ತು ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಬಳಕೆ ಮಾಡಲು ಅವಕಾಶ ನೀಡಲಾಗಿದೆ.