ಕಾಸರಗೋಡು: ಫ್ಯಾಷನ್ ಗೋಲ್ಡ್ ಜುವೆಲ್ಲರಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಅವರನ್ನು ರಿಮಾಂಡ್ ಮಾಡಲಾಗಿದೆ. ಶಾಸಕರನ್ನು ಕಾಞಂಗಾಡ್ ಜಿಲ್ಲಾ ಕಾರಾಗೃಹದ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಶನಿವಾರ ಮಧ್ಯಾಹ್ನ 3.30 ರ ಸುಮಾರಿಗೆ ಕಾಸರಗೋಡು ಎಸ್.ಪಿ. ಕಚೇರಿಯಲ್ಲಿ ಬಂಧಿಸಲಾಯಿತು. ಹಗರಣಕ್ಕೆ ಸಂಬಂಧಿಸಿದಂತೆ ಶಾಸಕರ ವಿರುದ್ಧ ಬಲವಾದ ಸಾಕ್ಷ್ಯಗಳ ಆಧಾರದ ಮೇಲೆ ಈ ಬಂಧನ ಮಾಡಲಾಗಿದೆ ಎಂದು ತನಿಖಾ ತಂಡದ ಮುಖ್ಯಸ್ಥ ಎಎಸ್ಪಿ ಪಿ ವಿವೇಕ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕಮರುದ್ದೀನ್ ಏಳು ವರ್ಷಗಳ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಗಳು ಬಲವಾಗಿದೆ. ಜ್ಯುವೆಲ್ಲರಿ ಎಂಡಿ ಪೂಕೋಯಾ ತಂಙಳ್ ಅವರನ್ನು ನಿನ್ನೆಯೇ ತನಿಖಾ ತಂಡ ಕರೆಸಿತ್ತು. ಆತನನ್ನು ಬಂಧಿಸಲಾಗುವುದು ಎಂದು ತಿಳಿದುಬಂದಿದೆ. ಶಾಸಕ ಮತ್ತು ಅವರ ತಂಡ 15 ಕೋಟಿ ರೂ.ಗಳ ಹಗರಣ ಎಸಗಿರುವುದು ಸ್ಪಷ್ಟವಾಗಿದೆ. ಚಂದೇರಾ ಪೆÇಲೀಸ್ ಠಾಣೆಯಲ್ಲಿ ದಾಖಲಾದ ನಾಲ್ಕು ಪ್ರಕರಣಗಳ ಸಂಬಂಧ ನಿನ್ನೆಯ ಮೊದಲ ಬಂಧನ ನಡೆದಿದೆ. ಶಾಸಕರ ವಿರುದ್ಧ 109 ವಂಚನೆ ಪ್ರಕರಣಗಳಿವೆ. ಶಾಸಕರನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ) ಶನಿವಾರ ಬೆಳಿಗ್ಗೆ ಕಾಸರಗೋಡು ಪೆÇಲೀಸ್ ವರಿಷ್ಠರ ಕಚೇರಿಯಲ್ಲಿ ಸಮಗ್ರ ತನಿಖೆ ನಡೆಸಿದೆ.
150 ಕೋಟಿ ರೂ!!:
ಶಾಸಕರ ವಿರುದ್ಧ ಮೊದಲ ಪ್ರಕರಣ ಆಗಸ್ಟ್ 27 ರಂದು ದಾಖಲಾಯಿತು. ತರುವಾಯ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 109 ಪ್ರಕರಣಗಳು ದಾಖಲಾಗಿವೆ. ಸುಮಾರು 800 ಹೂಡಿಕೆದಾರರಿಂದ 150 ಕೋಟಿ ರೂ.ಗಳಿಗಿಂತ ಹೆಚ್ಚು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ ವಿಶೇಷ ತಂಡ ತನಿಖೆಯನ್ನು ವಹಿಸಿಕೊಂಡಿತು. ಹಣವನ್ನು ಹಿಂದಿರುಗಿಸಲಾಗಿಲ್ಲ ಎಂದು ಹೂಡಿಕೆದಾರರು ದೂರಿದ್ದಾರೆ. ವಂಚನೆಯ ಮೂಲಕ ದೊರೆತ ಹಣದಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ಜಮೀನು ಖರೀದಿಸಿದ್ದರು ಎಂದು ಸಾಕ್ಷ್ಯ ಸಹಿತ ಲಭ್ಯವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ತಂಡವು ಈಗಾಗಲೇ 80 ಜನರಿಂದ ಹೇಳಿಕೆಗಳನ್ನು ತೆಗೆದುಕೊಂಡಿದೆ. ಶುಕ್ರವಾರ ಲೀಗ್ ನಾಯಕತ್ವದಿಂದ ಮಧ್ಯವರ್ತಿಯಾಗಿ ನೇಮಕಗೊಂಡಿದ್ದ ಪೂಕೊಯಾ ತಂಙಳ್ ಮತ್ತು ಕಲ್ಲಟ್ರ ಮಾಹಿನ್ ಹಾಜಿಯನ್ನು ಪ್ರಶ್ನಿಸಲಾಯಿತು. ಇದರ ಮುಂದುವರಿಕೆಯಾಗಿ ಶನಿವಾರ ತನಿಖಾ ತಂಡ ಶಾಸಕರನ್ನು ವಿಚಾರಣೆ ನಡೆಸಿತು. ಈ ಸಮಸ್ಯೆಯನ್ನು ಪರಿಹರಿಸಲು ಲೀಗ್ ನಾಯಕತ್ವದಿಂದ ನೇಮಕಗೊಂಡಿದ್ದ ಕಲ್ಲಟ್ರ ಮಾಹಿನ್ ಹಾಜಿ ಅವರು ಶುಕ್ರವಾರ ನಾಯಕತ್ವಕ್ಕೆ ವರದಿ ಮಾಡಿದ್ದರು. ಶಾಸಕರು ನಿಗದಿತ ಸಮಯದೊಳಗೆ ಹೂಡಿಕೆದಾರರಿಗೆ ಹಣವನ್ನು ಮರುಪಾವತಿಸಬಹುದೆಂದು ಅವರು ಖಚಿತಪಡಿಸಲು ನಿರಾಕರಿಸಿದ್ದರು.
ಸ್ವಂತ ವಾಹನದಲ್ಲಿ ಬಂದು ಪೆÇಲೀಸ್ ವಾಹನದಲ್ಲಿ ಮರಳಿದರು!:
ನಿನ್ನೆ ಬೆಳಿಗ್ಗೆ 10.30 ಕ್ಕೆ ಕಾಸರಗೋಡು ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ಕಚೇರಿಯ ಬಳಿಯಿರುವ ವಿಶೇಷ ತನಿಖಾ ತಂಡದ (ಎಸ್‍ಐಟಿ) ಕಚೇರಿಯನ್ನು ತಮ್ಮ ವಾಹನದಲ್ಲಿ ತಲುಪಿದ ಎಂ.ಸಿ ಕಮರುದ್ದೀನ್ ಸಂಜೆ 4.40 ಕ್ಕೆ ಪೆÇಲೀಸ್ ವಾಹನದಲ್ಲಿ ಮರಳಿದರು. ಫ್ಯಾಷನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣಗಳಲ್ಲಿ ವಿಚಾರಣೆಗಾಗಿ ಅವರನ್ನು ಕರೆಸಿದ ಬಳಿಕ ಶಾಸಕರನ್ನು ತನಿಖಾ ತಂಡ ಬಂಧಿಸಿದೆ. ಶಾಸಕರ ಬಂಧನವು ಶನಿವಾರವೇ ನಡೆಯಲಿದೆ ಎಂದು ಮಧ್ಯಾಹ್ನದ ಹೊತ್ತಿಗೆ ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದರು. ನಂತರ ಸಂಜೆ 4 ಗಂಟೆ ಸುಮಾರಿಗೆ ಬಂಧನವನ್ನು ತಾಂತ್ರಿಕವಾಗಿ ದಾಖಲಿಸಲಾಗಿದೆ. ಉಪ್ಪಳ ವಿಲ್ಲಾ ಮೂಲದ ತನ್ನ ಮಗನ ಒಡೆತನದ ಇನ್ನೋವಾ ಕಾರಿನ ಚಾಲಕನೊಂದಿಗೆ ಕಮರುದ್ದೀನ್ ತನಿಖಾ ತಂಡದ ಮುಂದೆ ಹಾಜರಾದರು. ಯಾವುದೇ ಬಂಧನಗಳನ್ನು ಕಮರುದ್ದೀನ್ ನಿರೀಕ್ಷಿಸಿರಲಿಲ್ಲ. ಅವರನ್ನು ಮೊದಲು ಪೆÇಲೀಸ್ ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಅವರನ್ನು ಜಿಲ್ಲಾ ಪೆÇಲೀಸ್ ಮುಖ್ಯಸ್ಥರ ಕಚೇರಿಯ ಬಳಿಯ ಕಟ್ಟಡವೊಂದರಲ್ಲಿ ಎರಡನೇ ಮಹಡಿಯ ಕೋಣೆಗೆ ವರ್ಗಾಯಿಸಲಾಯಿತು. ಇಲ್ಲಿ ತನಿಖೆಗಾಗಿ ವೀಡಿಯೊ ರೆಕಾಡಿರ್ಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.
ವಂಚನೆ ಅಸ್ತಿತ್ವದಲ್ಲಿಲ್ಲ:
ಎಂ.ಸಿ ಕಮರುದ್ದೀನ್ ಪರ ಹಾಜರಾದ ವಕೀಲ ಕೆ.ವಿನೋದ್‍ಕುಮಾರ್ ಅವರು ದೂರುಗಳನ್ನು ಪರಿಶೀಲಿಸುವ ಆಧಾರದ ಮೇಲೆ ವಂಚನೆ ಆರೋಪ ನಿಲ್ಲುವುದಿಲ್ಲ ಎಂದು ಹೇಳಿದರು. ಇದು ಸಿವಿಲ್ ಪ್ರಕರಣ ಮಾತ್ರ. ಮಾರಾಟಕ್ಕಾಗಿ ಹೂಡಿಕೆಯನ್ನು ಒಪ್ಪಿ ಬಳಿಕ ಮಾರಾಟ ಕುಸಿದಾಗ ಹಣವನ್ನು ಹಿಂದಿರುಗಿಸಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜುವೆಲ್ಲರಿ ನಷ್ಟದ ಕಾರಣ ನೀಡಿ ಮುಚ್ಚುಗಡೆಗೊಳಿಸುವ ಮೊದಲು ಹೂಡಿಕೆದಾರರು ಲಾಭಾಂಶವನ್ನು ಪಡೆದಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಈವರೆಗೆ ಕೇವಲ ನಾಲ್ಕು ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಬಂಧನಕ್ಕಾಗಿ ತನಿಖಾ ತಂಡವು ಅರ್ಜಿಯನ್ನು ಸಲ್ಲಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಅರ್ಜಿ ಸಲ್ಲಿಸಲಾಗುವುದು. ಈ ಪ್ರಕರಣದ ಸಂಬಂಧ ಬಂಧನದಿಂದ ಪಾರಾಗುವಂತೆ ಕೋರಿ ಕಮರುದ್ದೀನ್ ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಾಕಿ ಉಳಿದಿದೆ. ಈ ಬಗ್ಗೆ ನ್ಯಾಯಾಲಯಕ್ಕೂ ತಿಳಿಸುವುದಾಗಿ ಹೇಳಿದರು.
ಹೂಡಿಕೆದಾರರ ಹಣವನ್ನು ಹಿಂದಿರುಗಿಸಬೇಕು:
ಫ್ಯಾಷನ್ ಗೋಲ್ಡ್ ಹಗರಣಕ್ಕೆ ಬಲಿಯಾದ ಹೂಡಿಕೆದಾರರ ಹಣವನ್ನು ವಸೂಲಿ ಮಾಡುವ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಫ್ಯಾಷನ್ ಗೋಲ್ಡ್ ಕಾರ್ಯ ಸಮಿತಿಯ ಸದಸ್ಯ ಮತ್ತು ಜಿಲ್ಲಾ ಪಂಚಾಯತಿ ಸದಸ್ಯ ಪಿ.ಸಿ. ಸುಬೈದಾ ಹೇಳಿರುವರು. ವಂಚನೆಗೊಳಗಾದ ಬಡ ಹೂಡಿಕೆದಾರರ ವಿಷಯ ರಾಜಕೀಯ ಆಟಗಳಿಗೆ ಸೀಮಿತವಾಗಿರಬಾರದು ಎಂದು ಅವರು ಹೇಳಿದರು.
ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಬಂಧನ:
ಮೂರು ಗಂಟೆಗಳ ವಿಚಾರಣೆಯ ಬಳಿಕ ಶಾಸಕರು ನಿರ್ಣಾಯಕ ಹಂತದಲ್ಲಿ ಶರಣಾಗಲು ನಿರ್ಧರಿಸಿದರು. ಕೊನೆಯ ಕ್ಷಣದವರೆಗೂ ಬಂಧನದ ಯಾವುದೇ ಕುರುಹು ನೀಡದ ಅಧಿಕಾರಿಗಳು ಕೊನೆಗೂ ಬಂಧಿಸಿ ಅಚ್ಚರಿ ಮೂಡಿಸಿದರು. ಶಾಸಕರ ವಿರುದ್ಧ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಲೀಗ್ ನಾಯಕತ್ವವು ಕಮರುದ್ದೀನ್ ರಿಂದ ಅಂತರ ಕಾಯ್ದುಕೊಂಡಿತ್ತು. ಯುಡಿಎಫ್ ಜಿಲ್ಲಾಧ್ಯಕ್ಷರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿತ್ತು. ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಹೈಕೋರ್ಟ್ ತೀರ್ಪಿನ ಮುನ್ನ ಶನಿವಾರ ಈ ಬಂಧನ ನಡೆದಿದೆ.