ನವದೆಹಲಿ: ದೇಶದಲ್ಲಿ ಕೋವಿಡ್-19 ಪಿಡುಗಿನ ಸ್ಥಿತಿ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಡಿಸೆಂಬರ್ 4ರಂದು ಸರ್ವ ಪಕ್ಷ ಸಭೆ ಕರೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 10.30ಕ್ಕೆ ಆನ್‌ಲೈನ್ ಮೂಲಕ ಈ ಸಭೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸಚಿವ ಅರ್ಜನ್ ರಾಮ್ ಮೇಘವಾಲ್ ಸಭೆಯಲ್ಲಿ ಪಾಲ್ಗೊಳ್ಳುವರು.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಸತ್‌ನ ಚಳಿಗಾಲದ ಅಧಿವೇಶವನ್ನು ಮುಂಬರುವ ಬಜೆಟ್ ಅಧಿವೇಶನದೊಂದಿಗೇ ನಡೆಸುವ ಕುರಿತಂತೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.ಕೋವಿಡ್-19ಗೆ ಅಹಮದಾಬಾದ್, ಹೈದರಾಬಾದ್ ಹಾಗೂ ಪುಣೆಯಲ್ಲಿ ಪ್ರತ್ಯೇಕ ಮೂರು ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಈ ಕಂಪನಿಗಳಿಗೆ ಇತ್ತೀಚೆಗೆ ಪ್ರಧಾನಿ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿಯೂ ಡಿ. 4ರಂದು ನಡೆಯಲಿರುವ ಸಭೆಗೆ ಮಹತ್ವ ಇದೆ ಎಂದು ಹೇಳಲಾಗುತ್ತಿದೆ.ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಎಲ್ಲ ಪಕ್ಷಗಳ ಸಭಾನಾಯಕರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ದೇಶದಲ್ಲಿ ಕೋವಿಡ್-19 ಪಿಡುಗು ವ್ಯಾಪಕಗೊಂಡ ನಂತರ ನಡೆಯುತ್ತಿರುವ ಎರಡನೇ ಸರ್ವಪಕ್ಷ ಸಭೆ ಇದಾಗಿದೆ.