ನವದೆಹಲಿ: ದೇಶದೆಲ್ಲೆಡೆ ಇರುವ ಪರಿಸರ ಸೂಕ್ಷ್ಮ ವಲಯದ 50 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿಷೇಧ ಹೇರುವ ನಿರ್ದೇಶನವನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಕಲ್ಲಿದ್ದಲು ಗಣಿಗಾರಿಕೆ ಹರಾಜು ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಜಾರ್ಖಂಡ್ ಸರ್ಕಾರವು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, 'ಅರಣ್ಯಗಳ ಆರ್ಥಿಕ ಮೌಲ್ಯವನ್ನು ಸರ್ಕಾರಗಳು ಪರಿಗಣಿಸದೇ ಇರುವ ಕಾರಣ ಇಂಥ ಸಮಸ್ಯೆಗಳು ಉದ್ಭವಿಸುತ್ತದೆ. ದೇಶದಲ್ಲಿರುವ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಲು ನಾವು ಬಯಸುವುದಿಲ್ಲ. ಆದರೆ ಇದಕ್ಕಾಗಿ ಅರಣ್ಯದ ನೈಸರ್ಗಿಕ ಸಂಪನ್ಮೂಲದ ನಾಶ ಸರಿಯಲ್ಲ' ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ಅವರು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಹೇಳಿದರು.
2018ರಲ್ಲಿ ದೇಶದ 21 ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿ ಸಂರಕ್ಷಿತಾರಣ್ಯಗಳ 10 ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಗಣಿಗಾರಿಕೆಗೆ ಸಂಬಂಧಿಸಿದಂತೆ ಪರಿಸರದ ಮೇಲಾಗುವ ಪರಿಣಾಮದ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ರಚಿಸುವ ಕುರಿತೂ ಇದೇ ವೇಳೆ ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿತು. 'ಈ ಸಮಿತಿಗೆ ಎಲ್ಲ ಮಾಹಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಲಿ. ಈ ಸಮಿತಿಯು ಒಂದು ತಿಂಗಳೊಳಗೆ ನಿರ್ಧಾರಕ್ಕೆ ಬರಲಿ. ಇಲ್ಲವಾದಲ್ಲಿ ನಾವು ಇದಕ್ಕೆ ತಡೆ ನೀಡುತ್ತೇವೆ' ಎಂದು ವೇಣುಗೋಪಾಲ್ ಅವರಿಗೆ ಪೀಠವು ತಿಳಿಸಿತು.
ಈ ಪ್ರಸ್ತಾಪವನ್ನು ತಿರಸ್ಕರಿಸಿದ ವೇಣುಗೋಪಾಲ್, 'ಗಣಿಯು ಪರಿಸರ ಸೂಕ್ಷ್ಮ ವಲಯದಿಂದ 23-70 ಕಿ.ಮೀ. ದೂರದಲ್ಲಿದೆ' ಎಂದರು. 'ಆದರೆ, ಇದೂ ಪರಿಸರ ಸೂಕ್ಷ್ಮ ವಲಯಕ್ಕೆ ಹಾನಿಯಾಗುವಷ್ಟು ಹತ್ತಿರದಲ್ಲಿದೆ' ಎಂದು ಪೀಠವು ತಿಳಿಸಿತು. ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.