ನವದೆಹಲಿ: ದೆಹಲಿಯಲ್ಲಿ ಶುಕ್ರವಾರ ಕನಿಷ್ಠ ತಾಪಮಾನ 7.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು 14 ವರ್ಷಗಳಲ್ಲಿ ನವೆಂಬರ್ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ನಗರದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದರಿಂದ ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ 'ಸ್ಕೈಮೆಟ್'ನ ಮಹೇಶ್ ಪಲಾವತ್ ಅವರು ಮಾಹಿತಿ ನೀಡಿದರು.
ಸಾಮಾನ್ಯವಾಗಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದ್ದಾಗ ಶೀತ ಅಲೆಯನ್ನು ಘೋಷಿಸುತ್ತದೆ. ಆದರೆ ಇದೀಗ ಸತತ ಎರಡು ದಿನ ದೆಹಲಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಿದೆ ಎಂದು ಅವರು ಹೇಳಿದರು.
ಪಶ್ಚಿಮ ಹಿಮಾಲಯದಿಂದ ಶೀತ ಮಾರುತಗಳು ಬೀಸುತ್ತಿರುವುದರಿಂದಾಗಿ ದೆಹಲಿಯಲ್ಲಿ ತಾಪಮಾನ ಕುಸಿದಿದೆ. ಶನಿವಾರವೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಪಲಾವತ್ ಅವರು ತಿಳಿಸಿದರು.
ದೆಹಲಿಯಲ್ಲಿ ಕಳೆದ ವರ್ಷ ಕನಿಷ್ಠ ತಾಪಮಾನ 11.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2018 ರಲ್ಲಿ 10.5 ಮತ್ತು 2017ರಲ್ಲಿ 7.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.
1938 ನವೆಂಬರ್ ತಿಂಗಳಲ್ಲಿ ಅತಿ ಕನಿಷ್ಠ ತಾಪಮಾನ 3.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.