ಮುಂಬೈ: ದೇಶದಲ್ಲಿ ಕರೊನಾ ಪ್ರಮಾಣ ತಗ್ಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಸೋಂಕು ಮತ್ತೊಮ್ಮೆ ಹೆಚ್ಚಳ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ಲಾಕ್ಡೌನ್ ನಡೆಸಲು ಆಯಾ ರಾಜ್ಯಗಳು ಚಿಂತನೆ ನಡೆಸುತ್ತಿವೆ.
ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಕಳೆದ ವಾರಗಳಲ್ಲಿ ಭಾರಿ ಪ್ರಮಾಣದಲ್ಲಿ ತಗ್ಗಿತ್ತು. ಆದರೆ ಇದೀಗ ಮತ್ತೊಮ್ಮೆ ಏರಿಕೆಯಾಗುತ್ತಿದೆ. ಅದೇ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮಾಡಬಹುದು ಎನ್ನುವ ಸುದ್ದಿಗಳು ಹರಿದಾಡಿದೆ. ಈ ವಿಚಾರವಾಗಿ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ಅಲ್ಲಿನ ಸರ್ಕಾರ ಕೂಡ ತಿಳಿಸಿದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಅತಿ ಹೆಚ್ಚು ಜನ ಗುಂಪು ಸೇರಿದ್ದಾರೆ. ಗಣೇಶ ಚತುರ್ಥಿಯ ಸಮಯದಲ್ಲಿಯೂ ಇದೇ ರೀತಿಯಲ್ಲಿ ಆಗಿತ್ತು. ರಾಜ್ಯದಲ್ಲಿ ಸೋಂಕಿನ ಎರಡನೇ ಅಲೆ ಆರಂಭವಾಗುವ ಸೂಚನೆಯಿದೆ. ಮುಂದಿನ ಎಂಟರಿಂದ ಹತ್ತು ದಿನಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು. ನಂತರ ಲಾಕ್ಡೌನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.
ಎರಡನೇ ಹಂತದ ಲಾಕ್ಡೌನ್ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ 17.5 ಲಕ್ಷಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ.