ನವದೆಹಲಿ: ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಸುವಂತೆ ಕೋರಿರುವ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತೀರ್ಪನ್ನು ಕಾಯ್ದಿರಿಸಿತು.
ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವೇಳೆ, ಪಟಾಕಿಯಿಂದ ಎದುರಾಗಲಿರುವ ದುಷ್ಪರಿಣಾಮಗಳ ಮಾಹಿತಿ ಪಡೆದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠ, ಇದೇ 9ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ವಾಯು ಮಾಲಿನ್ಯದಿಂದ ಕೋವಿಡ್ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಪಟಾಕಿಯ ಬಳಕೆಯು ವಾಯು ಮಾಲಿನ್ಯ ಹೆಚ್ಚಿಸಲಿದೆ ಎಂದು ನ್ಯಾಯಮಂಡಳಿ ನೇಮಿಸಿರುವ ಆಮಿಕಸ್ ಕ್ಯೂರಿ ತಂಡ ಪೀಠಕ್ಕೆ ಮಾಹಿತಿ ನೀಡಿತು.
ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಮೂಲಕ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಬಹುದು. ಪಟಾಕಿ ಬಳಸುವವರಿಗೆ ₹ 10,000 ದಂಡ ವಿಧಿಸಬೇಕು ಎಂದು ಹಿರಿಯ ವಕೀಲ ರಾಜ್ ಪಂಜ್ವಾನಿ ಅವರು ಪೀಠಕ್ಕೆ ತಿಳಿಸಿದರು.
ದೆಹಲಿ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಪಟಾಕಿ ನಿಷೇಧಿಸಬೇಕು ಎಂದು ಕೋರಿ ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿರುವ ಪೀಠವು, ವಾಯು ಮಾಲಿನ್ಯ ಅಧಿಕ ಪ್ರಮಾಣದಲ್ಲಿರುವ ಇತರ 18 ರಾಜ್ಯಗಳಿಗೂ ಬುಧವಾರ ನೋಟಿಸ್ ನೀಡಿತ್ತು.
ದೇಶದ 122 ನಗರಗಳಲ್ಲಿ ಮಾಲಿನ್ಯ ಹೆಚ್ಚುವ ಮೂಲಕ ಅಪಾಯಕಾರಿ ಪ್ರಮಾಣದಲ್ಲಿದೆ ಎಂಬ ಅಂಶವನ್ನು ಈ ವರದಿ ಬಹಿರಂಗಪಡಿಸಿದ್ದರಿಂದ ಹಸಿರು ಪೀಠವು ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸಿತ್ತು.