ನ್ಯೂಯಾರ್ಕ್: ಅಮೆರಿಕ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಮತ್ತು ತನ್ನ ಜರ್ಮನಿ ಮೂಲದ ಪಾಟ್ರ್ನರ್ ಬಯೋನ್ ಟೆಕ್ ಸಂಸ್ಥೆ ಜಂಟಿಯಾಗಿ ಸಂಶೋಧಿಸಿರುವ ಕೋವಿಡ್ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದ್ದು, ಸರ್ಕಾರದ ತುರ್ತು ಅನುಮೋದನೆ ಅಗತ್ಯ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಫಿಜರ್ ಸಂಸ್ಥೆ ತನ್ನ ಲಸಿಕಾ ಪ್ರಯೋಗದ 2ನೇ ಮಧ್ಯಂತರ ವರದಿ ಬಂದಿದ್ದು, ವರದಿಯಲ್ಲಿ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದೆ. ಅಂತೆಯೇ ಸೋಂಕಿಗೆ ತುತ್ತಾದ ಹಿರಿಯ ವಯಸ್ಕರು ಸಾವಿನ ದವಡೆಗೆ ನೂಕುವುದನ್ನು ತಡೆಯುತ್ತದೆ. ಲಸಿಕೆಯನ್ನು ಕೋವಿಡ್ ಸೋಂಕು ದೃಢಪಟ್ಟ 170 ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದ್ದು, ಲಸಿಕೆಯ ಪ್ರಾಥಮಿಕ ಪರಿಣಾಮಕಾರಿತ್ವದ ವಿಶ್ಲೇಷಣೆಯು ಮೊದಲ ಡೋಸ್ ನೀಡಿದ 28 ದಿನಗಳ ನಂತರ ಕೋವಿಡ್ -19 ವಿರುದ್ಧ ಬಿಎನ್‍ಟಿ 162 ಬಿ 2 ಲಸಿಕೆ ಶೇಕಡಾ 95 ರಷ್ಟು ಪರಿಣಾಮಕಾರಿ ಎಂದು ತೋರಿಸುತ್ತಿದೆ. ಪ್ಲೇಸಿಬೊ ಗುಂಪಿನಲ್ಲಿ 162 ಮಂದಿಯ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ನವೆಂಬರ್ 9ರಂದು ಫಿಜರ್ ಸಂಸ್ಥೆ ತನ್ನ ಲಸಿಕಾ ಪ್ರಯೋಗ ಶೇ.90ರಷ್ಟು ಪರಿಣಾಮಕಾರಿಯಾಗಿದೆ ಎಂದು ತನ್ನ ಮೊದಲ ಮದ್ಯಂತರ ವರದಿಯಲ್ಲಿ ಹೇಳಿತ್ತು. ಈ ಪ್ರಯೋಗಕ್ಕಾಗಿ 100 ಸೋಂಕಿತರನ್ನು ಬಳಕೆ ಮಾಡಲಾಗಿತ್ತು. ಈ ಪ್ರಯೋಗಕ್ಕೆ ಸುಮಾರು 43 ಸಾವಿರ ಸ್ವಯಂ ಕಾರ್ಯಕರ್ತರು ಹೆಸರು ನೋಂದಾಯಿಸಿಕೊಂಡಿದ್ದರು.
ಪ್ರಸ್ತುತ ಫಿಜರ್ ಸಂಸ್ಥೆಯಲ್ಲಿ 170 ಮಂದಿ ಸೋಂಕಿತರು ಲಸಿಕಾ ಪ್ರಯೋಗದಲ್ಲಿದ್ದು, ಈ ಪೈಕಿ ಲಸಿಕೆ ತೆಗೆದುಕೊಂಡ ಹೊರತಾಗಿಯೂ 8 ಮಂದಿ ಸ್ವಯಂ ಕಾರ್ಯಕರ್ತರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಒಬ್ಬರಲ್ಲಿ ಸೋಂಕಿನ ಲಕ್ಷಣಗಳು ಉಲ್ಬಣಗೊಂಡಿದೆ ಎಂದು ಸಂಸ್ಥೆ ಹೇಳಿದೆ.