ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಅಂಗವಾಗಿ ಮತಯಾಚನೆ ನಡೆಸುವ ವೇಳೆ ಕೋವಿಡ್ ಜಾಗ್ರತೆ ಕೈಬಿಡಕೂಡದು. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳೂ ಚುನಾವಣೆ ಪ್ರಚಾರ ವೇಳೆ ಕಡ್ಡಾಯವಾಗಿ ಕೋವಿಡ್ ಪ್ರತಿರೋಧ ಕಟ್ಟುನಿಟ್ಟುಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಮನೆ ಮನೆ ಸಂದರ್ಶನ ನಡೆಸಿ ಮತಯಾಚನೆ ನಡೆಸುವ ವೇಳೆ ಅಭ್ಯರ್ಥಿ ಸಹಿತ ಗರಿಷ್ಠ 5 ಮಂದಿ ಮಾತ್ರ ಇರಲು ಅನುಮತಿಯಿದೆ. ಕೋವಿಡ್ ಹಿನ್ನೆಲೆಯಲ್ಲಿ ಮೆರವಣಿಗೆ, ಗುಂಪು ಸೇರುವಿಕೆ ಇತ್ಯಾದಿ ಕೈಬಿಡಬೇಕು. ಸಾರ್ವಜನಿಕ ಸಭೆ, ಕುಟುಂಬ ಸಭೆಗಳು ಇತ್ಯಾದಿ ನಡೆಸುವ ವೇಳೆ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದವರು ನುಡಿದರು.
ಸಾರ್ವಜನಿಕ ಸಭೆ ನಡೆಸುವ ವೇಳೆ ಪೆÇಲೀಸರ ಮುಂಗಡ ಅನುಮತಿ ಪಡೆದಿರಬೇಕು. ರೋಡ್ ಶೋ, ವಾಹನ ರಾಲಿ ಇತ್ಯಾದಿಗಳಿಗೆ ಗರಿಷ್ಠ ಮೂರು ವಾಹನಗಳನ್ನು ಮಾತ್ರ ಬಳಸಬೇಕು. ಅಭ್ಯರ್ಥಿಗಳಿಗೆ ಹಾರಾರ್ಪಣೆ, ನೋಟು ಮಾಲೆ, ಶಾಲು ಇತ್ಯಾದಿ ಹಾಕಿ ಸ್ವಾಗತ ನೀಡಬಾರದು. ಯಾರಾದರೂ ಅಭ್ಯರ್ಥಿಗೆ ಕೋವಿಡ್ ಸೋಂಕು ತಗುಲಿದಲ್ಲಿ ಕ್ವಾರೆಂಟೈನ್ ಪ್ರವೇಶಿಸಿ, ತಪಾಸಣೆಯಲ್ಲಿ ನೆಗೆಟಿವ್ ಫಲಿತಾಂಶ ಲಭಿಸಿ, ಆರೋಗ್ಯ ಇಲಾಖೆ ಆದೇಶ ನೀಡಿದ ಮೇಲಷ್ಟೇ ಪ್ರಚಾರ ರಂಗಕ್ಕೆ ಇಳಿಯಬೇಕು. ಅಲ್ಲಿ ವರೆಗೆ ಪ್ರಚಾರ, ಜನಸಂಪರ್ಕ ನಡೆಸಕೂಡದು. ಮತದಾತರು ಮಾಸ್ಕ್, ಸಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಎಂಬ ಸಂದೇಶವನ್ನು ಎಲ್ಲ ಅಭ್ಯರ್ಥಿಗಳೂ, ಇತರರೂ ಪ್ರಚಾರದ ವೇಳೆ ತಿಳಿಸಬೇಕು ಎಂದವರು ನಿರ್ದೇಶನ ನೀಡಿರುವರು.