ತಿರುವನಂತಪುರ: ಮಹಾರಾಷ್ಟ್ರ ನಂತರ ಇದೀಗ ಕೇರಳ ಸಹ ಸಿಬಿಐಗೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆ ಹಿಂಪಡೆದಿದ್ದು, ಇನ್ನು ಮುಂದೆ ದೇವರ ನಾಡಿನಲ್ಲಿ ಯಾವುದೇ ಪ್ರಕರಣಗಳ ತನಿಖೆ ನಡೆಸಲು ಸಿಬಿಐ, ರಾಜ್ಯ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿದೆ.
ಇತ್ತೀಚಿಗಷ್ಟೇ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ, ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂದಕ್ಕೆ ಪಡೆದಿತ್ತು. ಈಗ ಕೇರಳ ಸಹ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದೆ.
ಅನಿಲ್ ಅಕ್ಕರ ಅವರ ಮನವಿಯ ಮೇರೆಗೆ ಸಿಬಿಐ ಲೈಫ್ ಮಿಷನ್ ಯೋಜನೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ಆರಂಭಿಸಿತ್ತು. ಅಲ್ಲದೆ ಈ ಸಂಬಂಧ ಕೆಲವು ಅಧಿಕಾರಿಗಳಿಗೆ ಸಮನ್ಸ್ ಸಹ ನೀಡಿತ್ತು. ಇದರ ಬೆನ್ನಲ್ಲೇ ಕೇರಳ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈ ಮೊದಲು ಇತರೆ ಮೂರು ರಾಜ್ಯಗಳಾದ ರಾಜಸ್ತಾನ, ಛತ್ತೀಸ್‍ಗಡ ಮತ್ತು ಪಶ್ಚಿಮಬಂಗಾಳ ಸರ್ಕಾರಗಳು ತಮ್ಮ ರಾಜ್ಯದಲ್ಲಿ ಸಿಬಿಐಗೆ ತನಿಖೆ ನಡೆಸಲು ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿದ್ದವು.