ನವದೆಹಲಿ: ಭಾರತದ ಸದ್ಯದ ರಾಜಕಾರಣದಲ್ಲಿ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷವಾಗಿ ಬಿಜೆಪಿಯ ಪ್ರಾಬಲ್ಯಕ್ಕೆ ಕಾರಣಗಳನ್ನು ಇತಿಹಾಸದಿಂದ ಹೆಕ್ಕಿ ತೆಗೆದ ಪುಸ್ತಕವೊಂದು ಶೀಘ್ರ ಬಿಡುಗಡೆಯಾಗಲಿದೆ.
ಬಿಜೆಪಿಯ ಬೇರುಗಳನ್ನು ಅದರ ಹಿಂದಿನ ಅವತರಣಿಕೆಯಾದ ಜನಸಂಘ ಮತ್ತು ಅದರ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮೂಲಕ ಶೋಧಿಸುವ ಯತ್ನ ಈ ಪುಸ್ತಕದಲ್ಲಿದೆ. ನೂರು ವರ್ಷಗಳ ಇತಿಹಾಸ ಕಟ್ಟಿಕೊಡುವ ಈ ಪುಸ್ತಕದಲ್ಲಿ ಜನಸಂಘ-ಬಿಜೆಪಿಗೆ ದೇಶದಲ್ಲಿ ಗಟ್ಟಿ ಅಡಿಪಾಯ ಹಾಕಿದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಆಡ್ವಾಣಿ ಅವರ ಪಾತ್ರಗಳ ಶೋಧನೆಯೂ ಇದೆ.
ಆ ಕೃತಿಯ ಹೆಸರು 'ಜುಗಲ್‌ಬಂದಿ: ದಿ ಬಿಜೆಪಿ ಬಿಫೋರ್ ಮೋದಿ'. ರಾಜ್ಯಶಾಸ್ತ್ರ ತಜ್ಞ ವಿನಯ್ ಸೀತಾಪತಿ ಈ ಪುಸ್ತಕವನ್ನು ರಚಿಸಿದ್ದಾರೆ. ನವೆಂಬರ್ 23ರಂದು ಪೆಂಗ್ವಿನ್‌ನ 'ವೈಕಿಂಗ್' ಇಂಪ್ರಿಂಟ್ ಅಡಿಯಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ.
ಖಾಸಗಿ ದಾಖಲೆಗಳು, ಪಕ್ಷದ ದಾಖಲಾತಿಗಳು, ಸುದ್ದಿ ಪತ್ರಿಕೆಗಳನ್ನು ಆಧರಿಸಿ ರಚಿಸಿರುವ ಈ ಕೃತಿಯಲ್ಲಿ, 200ಕ್ಕೂ ಹೆಚ್ಚು ಸಂದರ್ಶನಗಳಿವೆ. ಇದು ಬಿಜೆಪಿಯ ಅಧಿಕೃತ ದಾಖಲಾತಿಯಾಗಲಿದೆ ಎಂದು ಹೇಳಲಾಗುತ್ತಿದೆ.
'ಭಾರತದ ರಾಜಕಾರಣದಲ್ಲಿ ಮೋದಿ ಮತ್ತು ಬಿಜೆಪಿಯ ಪ್ರಾಬಲ್ಯ ದಿಢೀರನೆ ಸಂಭವಿಸಿರುವುದಾಗಿ ತೋರುತ್ತದೆ. ಆದರೆ, ಇದು ನಿಜಕ್ಕೂ ನೂರು ವರ್ಷಗಳ ಕಥೆ. ಈ ಕಥೆಯ ಮೂಲಕವೇ ಆರ್‌ಎಸ್‌ಎಸ್, ಜನಸಂಘ, ಬಿಜೆಪಿ ರಚನೆ ಕುರಿತು ವಿವರಿಸಲಾಗಿದೆ' ಎಂದು ಕೃತಿಯ ಲೇಖಕ ಸೀತಾಪತಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
'ಕಥೆ ಮೂಲಕವೇ ವಾಜಪೇಯಿ ಮತ್ತು ಅಡ್ವಾಣಿಯವರಿಂದ ಹಿಡಿದು ನರೇಂದ್ರ ಮೋದಿ, ಅಮಿತ್ ಶಾವರೆಗಿನ ವ್ಯಕ್ತಿಗಳ ಪರಿಚಯ ಮತ್ತು ಈ ಜೋಡಿಗಳ ನಡುವಿನ ಸಂಬಂಧವನ್ನು ವಿವರಿಸಲಾಗಿದೆ. ಹೊಸ ಭಾರತದ ಇತಿಹಾಸವನ್ನು ತಿಳಿಯಬೇಕೆನ್ನುವ ಓದುಗರಿಗೆ ಇದೊಂದು ಉತ್ತಮ ಪುಸ್ತಕವಾಗಲಿದೆ' ಎಂದು ಸೀತಾಪತಿ ಹೇಳಿದ್ದಾರೆ.