ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಕೈಗೊಂಡಿರುವ ವೆಟ್ರಿವೇಲ್ ಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಡಳಿತಾರೂಢ ಎಐಎಡಿಎಂಕೆ , ತಮಿಳುನಾಡಿನ ಜನರನ್ನು ಜಾತಿ, ಮತಗಳ ಆಧಾರದಲ್ಲಿ ಒಡೆಯುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದೆ.
ನ.21 ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚೆನ್ನೈ ಗೆ ಭೇಟಿ ನೀಡುತ್ತಿರುವುದು ಹಾಗೂ ರಾಜ್ಯದಲ್ಲಿ ಬಿಜೆಪಿ ವೆಟ್ರಿವೇಲ್ ಯಾತ್ರೆ ಕೈಗೊಂಡಿರುವುದರ ಬಗ್ಗೆ ನಮಧು ಅಮ್ಮ ಮುಖವಾಣಿಯಲ್ಲಿ ಬರೆದಿರುವ ಎಐಎಡಿಎಂಕೆ,
ಜನರನ್ನು ಜಾತಿ-ಮತಗಳ ಆಧಾರದಲ್ಲಿ ವಿಭಜಿಸುವ ಯಾತ್ರೆಗಳಿಗೆ ಎಐಎಡಿಎಂಕೆ ಅವಕಾಶ ನೀಡುವುದಿಲ್ಲ ಇದನ್ನು ಕುರುಪ್ಪರ್ ಕೊಟ್ಟಮ್ (ಕಂದ ಶಷ್ಠಿ ಕವಚಕ್ಕೆ ಅಳವಡಿಸುವ ಆಯುಧ) ವನ್ನು ಹಿಡಿದಿರುವವರು ಹಾಗೂ ಕೇಸರಿ ಧ್ವಜ ಹಿಡಿದಿರುವವರು ತಮಿಳುನಾಡಿನ ಜನರು ಪಾಲಿಸುತ್ತಿರುವ ಏಕತೆ ಹಾಗೂ ಸೌಹಾರ್ದತೆಯನ್ನು ಅರ್ಥ ಮಾಡಿಕೊಳ್ಳಬೇಕೆಂದು ಎಐಎಡಿಎಂಕೆ ಹೇಳಿದೆ.
ವೇಲ್ ಯಾತ್ರೆಗೆ ತಡೆಯೊಡ್ಡುವ ಪ್ರಯತ್ನದಿಂದ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಬಿಜೆಪಿ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷರಾದ ವನತಿ ಶ್ರೀನಿವಾಸನ್ ಅವರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ನಮಧು ಅಮ್ಮಾ, ಮಾನವಿಯತೆಗಾಗಿಯೇ ಧರ್ಮ ಇರುವುದೇ ಹೊರತು ಭಾವೋದ್ರೇಕಗಳನ್ನು ಹೊತ್ತಿಸುವುದಕ್ಕಾಗಿ ಅಲ್ಲ ಎಂದು ತಿರುಗೇಟು ನೀಡಿದ್ದು, ತಮಿಳುನಾಡು ಧಾರ್ಮಿಕ ನೆಲೆಗಟ್ಟಿನಲ್ಲಿ ಮತ ಬ್ಯಾಂಕ್ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ.