ಮಲಪ್ಪುರಂ: ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದೆ. ಕೇರಳದ ಮಲಪ್ಪುರಂ ಭಾಗದಲ್ಲಿ ಈ ಬಾರಿ ದಾಖಲೆಯೊಂದು ನಿರ್ಮಾಣವಾಗಿದೆ. ಅದೇನೆಂದರೆ ಬಿಜೆಪಿ ತನ್ನ ಇಬ್ಬರು ಸ್ಪರ್ಧಿಗಳಾಗಿ ಮುಸ್ಲಿಂ ಮಹಿಳೆಯರನ್ನು ಆಯ್ಕೆ ಮಾಡಿದೆ!
ಮುಸ್ಲಿಂ ಸಮಯದಾಯವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಇಬ್ಬರು ಮುಸ್ಲಿಮರು, ಅದೂ ಮಹಿಳೆಯರಿಗೆ ಟಿಕೆಟ್ ನೀಡಿರುವುದು ಇತಿಹಾಸವೆಂದೇ ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿಗಳಾಗಿರುವ ಇಬ್ಬರು ಮಹಿಳೆಯರು ಈ ಭಾಗದಲ್ಲಿ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಲಪ್ಪುರದಲ್ಲಿ ಡಿ.14ರಂದು ಚುನಾವಣೆ ನಡೆಯಲಿದೆ. ಟಿ.ಪಿ.ಸಲ್ಫತ್ ಮತ್ತು ಆಯೇಷಾ ಹುಸೇನ್ ಅವರಿಗೆ ಬಿಜೆಪಿ ಟಿಕೆಟ್ ನಿಡಿದೆ. ಸಲ್ಫತ್ ಅವರು ವಂಡೂರು ಗ್ರಾಮ ಪಂಚಾಯಿತಿಯಿಂದ ಹಾಗೂ ಆಯಿಷಾ ಪೊನ್ಮುಂಡಂ ಗ್ರಾಮ ಪಂಚಾಯಿತಿಯಿಂದ ಕಣಕ್ಕೆ ಇಳಿಯಲಿದ್ದು, ಇದಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ವಿಶೇಷ ಎಂದರೆ ಮಲಪ್ಪುರಂ ಕೇರಳದ ಏಕೈಕ ಮುಸ್ಲಿಂ ಮೆಜಾರಿಟಿ ಇರುವ ಜಿಲ್ಲೆ ಎನ್ನಲಾಗಿದೆ. ಮಾತ್ರವಲ್ಲದೇ ಈ ಜಿಲ್ಲೆ ಮಹಿಳೆಯರು ಮತ್ತು ಪುರುಷರ ಅನುಪಾತದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಗೆ ಇರುವ ದೇಶದ ಟಾಪ್ ಜಿಲ್ಲೆ ಎಂಬ ಖ್ಯಾತಿಯನ್ನೂ ಪಡೆದಿದೆ. ಪ್ರತಿ 1096 ಮಹಿಳೆಯರಿಗೆ 1000 ಪುರುಷರು ಇಲ್ಲಿದ್ದಾರೆ.
ತಾವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದು, ರಾಜಕೀಯರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕುರಿತು ಮೋದಿಯವರ ಯೋಜನೆಯಿಂದ ನಾನು ಪ್ರಭಾವಿತಳಾಗಿದ್ದೇನೆ ಎನ್ನುತ್ತಾರೆ ಸಲ್ಫತ್.
ತ್ರಿವಳಿ ತಲಾಖ್ ಅನ್ನು ನಿಷೇಧ, ಮಹಿಳೆಯರಿಗೆ ಮದುವೆಯಾಗುವ ವಯಸ್ಸನ್ನು ಹೆಚ್ಚಿಸುವಂತಹ ಪ್ರಗತಿಪರ ಕ್ರಮಗಳನ್ನು ಜಾರಿಗೊಳಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಮೋದಿಜಿಯನ್ನು ವರ್ಚಸ್ಸಿನಲ್ಲಿ ಮಾತ್ರವಲ್ಲದೆ ದಕ್ಷತೆ ಮತ್ತು ದೃಢ ನಿಶ್ಚಯದಲ್ಲೂ ಸರಿ ಹೊಂದುವವರು ಪ್ರಸ್ತುತ ಭಾರತೀಯ ರಾಜಕೀಯದಲ್ಲಿ ಯಾರೂ ಇಲ್ಲ ಎಂದಿದ್ದಾರೆ. ಇವರಿಗೆ ಜಿಲ್ಲಾ ಪಂಚಾಯತ್ ವಿಭಾಗವನ್ನು ನೀಡಲಾಗಿದ್ದರೂ, ಅವರು ತಳಮಟ್ಟದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರಿಂದ ಆಕೆ ತಮ್ಮದೇ ಗ್ರಾಮ ಪಂಚಾಯಿತಿ ಆರಿಸಿಕೊಂಡಿದ್ದಾರೆ.
ಆಯೇಷಾ ಅವರು ರಾಜಕೀಯ ಹಿನ್ನೆಲೆ ಹೊಂದಿದ್ದಾರೆ. ಅವರ ಗಂಡ ಹುಸೇನ್ ವರಿಕ್ಕೋಟ್ಟಿಲ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಸಮಿತಿ ಸದಸ್ಯರಾಗಿದ್ದಾರೆ. ಅವರು ಕೂಡ ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.