ಹೊಸದಿಲ್ಲಿ: ದೇಶಾದ್ಯಂತ ಎಲ್ಲ ವಾಹನಗಳಿಗೆ ಕ್ಯೂಆರ್ ಕೋಡ್‌ನೊಂದಿಗೆ ಏಕರೂಪದ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರಗಳನ್ನು ಶೀಘ್ರವೇ ಜಾರಿಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಉದ್ದೇಶಿಸಿದೆ. ಏಕರೂಪದ ಪಿಯುಸಿ ಪ್ರಮಾಣಪತ್ರಗಳ ಮೇಲಿನ ಕ್ಯೂಆರ್ ಕೋಡ್ ಮಾಲಿಕ,ವಾಹನ ಮತ್ತು ಹೊಗೆ ಸೂಸುವಿಕೆಯ ಸ್ಥಿತಿಗತಿಯ ಕುರಿತು ನಿರ್ದಿಷ್ಟ ವಿವರಗಳನ್ನು ಒಳಗೊಂಡಿರಲಿದೆ. ಸಚಿವಾಲಯವು ಈ ಬದಲಾವಣೆಗಳನ್ನು ಪ್ರಸ್ತಾವಿಸಿ ಕರಡು ಅಧಿಸೂಚನೆಯೊಂದನ್ನು ಶುಕ್ರವಾರ ಹೊರಡಿಸಿದ್ದು,ಪಾಲುದಾರರಿಂದ ಸಲಹೆಗಳು ಮತ್ತು ಆಕ್ಷೇಪಗಳನ್ನು ಆಹ್ವಾನಿಸಿದೆ.
ಸಾರಿಗೆ ಸಚಿವಾಲಯವು ಈಗಾಗಲೇ ಕೇಂದ್ರ ಮೋಟಾರ್ ವಾಹನಗಳ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಸ್ತಾವಿಸಿದ್ದು,ಪಿಯುಸಿಯನ್ನು ಮಾಡಿಸುವುದಕ್ಕೆ ಮುನ್ನ ಮಾಲಿಕನ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಿಸ್ಟಮ್ ಜನರೇಟೆಡ್ ಎಸ್‌ಎಂಎಸ್ ರವಾನೆಯಾಗಲಿದೆ. ಈ ಎಸ್‌ಎಂಎಸ್ ಸಿಸ್ಟಮ್ ವಾಹನಗಳ ಕಳ್ಳತನಗಳಿಗೆ ಕಡಿವಾಣ ಹಾಕಲು ಸಹ ನೆರವಾಗಲಿದೆ. ಪಿಯುಸಿ ಪ್ರಮಾಣಪತ್ರವನ್ನು ಪಡೆಯಲು ವಾಯುಮಾಲಿನ್ಯ ಪರೀಕ್ಷಾ ಕೇಂದ್ರಗಳಿಗೆ ವಾಹನವನ್ನು ಒಯ್ದಾಗ ಅದು ಕಳ್ಳತನದ ವಾಹನವೇ ಎನ್ನುವುದನ್ನು ಪತ್ತೆ ಹಚ್ಚಬಹುದಾಗಿದೆ.
ಪಿಯುಸಿ ಪ್ರಮಾಣಪತ್ರಗಳ ಏಕರೂಪದ ನಮೂನೆಯು ಪಿಯುಸಿ ದತ್ತಾಂಶ ಕೋಶವನ್ನು ರಾಷ್ಟ್ರೀಯ ರಿಜಿಸ್ಟರ್‌ನೊಂದಿಗೆ ಜೋಡಣೆಗೊಳಿಸಲು ಉದ್ದೇಶಿಸಿದೆ. ಸರಕಾರವು ಇದೇ ಮೊದಲ ಬಾರಿಗೆ ಪಿಯುಸಿ ಪ್ರಮಾಣಪತ್ರ ನೀಡಲು ನಿರಾಕರಣೆಗೆ ಕಾರಣವನ್ನು ಉಲ್ಲೇಖಿಸಿ 'ರಿಜೆಕ್ಷನ್ ಸ್ಲಿಪ್ 'ಅನ್ನು ಒದಗಿಸಲೂ ಉದ್ದೇಶಿಸಿದೆ.
ಕಾನೂನಿನಲ್ಲಿ ಉದ್ದೇಶಿತ ಪರಿಷ್ಕರಣೆಗಳಡಿ ವಾಹನವು ವಾಯುಮಾಲಿನ್ಯ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದು ಜಾರಿ ಅಧಿಕಾರಿಯು ಭಾವಿಸಿದರೆ ಅವರು ಯಾವುದೇ ಅಧಿಕೃತ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆ ಮಾಡಿಸುವಂತೆ ಮಾಲಿಕನಿಗೆ ಸೂಚಿಸಬಹುದು.
ವಾಹನದ ಮಾಲಿಕ ಅಥವಾ ಆ ಸಂದರ್ಭದಲ್ಲಿ ವಾಹನವನ್ನು ಹೊಂದಿರುವ ವ್ಯಕ್ತಿಯು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಒದಗಿಸಲು ವಿಫಲಗೊಂಡರೆ ಮೋಟಾರ್ ವಾಹನಗಳ ಕಾಯ್ದೆಯಡಿ ಮೂರು ತಿಂಗಳವರೆಗೆ ಜೈಲುಶಿಕ್ಷೆ ಅಥವಾ 10,000 ರೂ.ವರೆಗೆ ದಂಡ ಮತ್ತು ಮೂರು ತಿಂಗಳ ಅವಧಿಗೆ ವಾಹನ ಚಾಲನೆ ಪರವಾನಿಗೆ ಅಮಾನತಿಗೆ ಗುರಿಯಾಗಬೇಕಾಗುತ್ತದೆ.