ಮಂಜೇಶ್ವರ: ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗು ಜುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ರಾಜೀನಾಮೆ ನೀಡುವ ತನಕ ತೀವ್ರ ಹೋರಾಟ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ರೈ ಹೇಳಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು, ಚಿನ್ನ ಠೇವಣಿ ಪ್ರಕರಣದ ಆರೋಪಿಯಾದ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಶಾಸಕರನ್ನು ಕೂಡಲೇ ಬಂಧಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿಕೊಂಡು ಬಿಜೆಪಿ ಭಾನುವಾರ(ನವೆಂಬರ್ 1ರಂದು) ಕೇರಳ ಉದಯ ದಿನದಂದು ತಲಪ್ಪಾಡಿಯಿಂದ ತೊಡಗಿ ಜಿಲ್ಲೆಯ ಗಡಿ ಪ್ರದೇಶವಾದ ಕಾಲಿಕ್ಕಡವ್ ತನಕ ಆಯೋಜಿಸಿದ ಪ್ರತಿಭಟನಾ ಜಾಲದ ಅಂಗವಾಗಿ ತಲಪಾಡಿಯ ಗಡಿಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಚಳವಳಿಯನ್ನು ಬಲಪಡಿಸುವುದರ ಅಂಗವಾಗಿ ಕೇರಳ ರಾಜ್ಯ ವ್ಯಾಪಕವಾಗಿ ಬಿಜೆಪಿ ನಡೆಸುವ ಹೋರಾಟಗಳ ಜಾಲದ ಸಲುವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ತಲಪ್ಪಾಡಿಯಿಂದ ತೊಡಗಿ ಕಾಸರಗೋಡು ತನಕದ ರಾಷ್ಟ್ರೀಯ ಹೆದ್ದಾರಿ(66)ಯಲ್ಲಿಯೂ ಕಾಸರಗೋಡಿನಿಂದ ಕಾಂಞಂಗಾಡು ತನಕದ ಕೆಎಸ್‍ಟಿಪಿ ರಸ್ತೆಯಲ್ಲಿಯೂ ಬಳಿಕ ರಾಷ್ಟ್ರೀಯ ಹೆದ್ದಾರಿ 66ರಲ್ಲಾಗಿ ಜಿಲ್ಲೆಯ 830 ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಪದ್ಮನಾಭ ಕಡಪ್ಪುರ, ನ್ಯಾಯವಾದಿ ನವೀನ್ ರಾಜ್, ಆದರ್ಶ ಬಿ.ಎಂ., ಯಾದವ ಬಡಾಜೆ, ಬಾಬು ಮಾಸ್ತರ್, ಲೋಕೇಶ್ ಮಾಡ, ವಿನ್ಸಿ ಡಿಸಿಲ್ವ, ಯಾಸ್ಪಲ್ ಮೊದಲಾದವರು ನೇತೃತ್ವ ನೀಡಿದ್ದರು.