ಕಾಸರಗೋಡು: ಸರ್ಕಾರದ ವ್ಯವಸ್ಥೆಗಳು ವಿವಿಧ ಕಾರಣಗಳ ಹೆಸರಲ್ಲಿ ತಳೆಯುವ ನಿರ್ಧಾರಗಳು ಜನಸಾಮಾನ್ಯರನ್ನು ಯಾವ ಸಂಕಷ್ಟಕ್ಕೊಯ್ಯುತ್ತದೆ ಎಂಬ ಕನಿಷ್ಠ ಅರಿವೂ ಇಲ್ಲದಿರುವುದು ಈಗಿನ ಕಾಲದಲ್ಲಿ ನಂಬುದಾದರೂ ಹೇಗೆ?. ಜೊತೆಗೆ ಕೆಲವು ವ್ಯವಸ್ಥೆಗಳು ತಾವು ಹೀಗೆಯೇ ಇರುವುದೆಂಬ ಕುತ್ಸಿತ ಮನೋಸ್ಥಿತಿಯಿಂದ ಹೊರಬಾರದಿರುವುದು ಒಪ್ಪಿಕೊಳ್ಳಬೇಕಾದ್ದೆ.
ನಿನ್ನೆ ಏನಾಯಿತೆಂದರೆ........... ಮಳೆಯ ಕಾರಣ ಬದಲಾದ ಸಮಯದ ಬಗ್ಗೆ ರೈಲ್ವೆ ಮಾಹಿತಿ ನೀಡದೆ ನಿಗದಿತ ಅವಧಿಗಿಂತ ಮೊದಲೇ ಪ್ರಯಾಣಿಸಿದರೆ ಯಾರು ಹೊಣೆ!. ಮುಂಬೈಯಿಂದ ತಿರುವನಂತಪುರ ಸೆಂಟ್ರಲ್ ಗೆ ತೆರಳುವ ರೈಲು ನಿನ್ನೆ ವಾಡಿಕೆಯ ಸಮಯಕ್ಕಿಂತ ಒಂದು ಗಂಟೆ ಮೊದಲೇ ಸಂಚರಿಸಿದ್ದರಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೊಳಗಾದ ಘಟನೆ ನಿನ್ನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆದು ಕಳವಳ ಮೂಡಿಸಿತು.
ಆದರೆ ಸಮಯಕ್ಕೆ ಸರಿಯಾಗಿ ಆಗಮಿಸಿದ್ದ ನೂರಾರು ಪ್ರಯಾಣಿಕರು ಇದರಿಂದ ತೀವ್ರ ಹತಾಶೆಗೊಳಗಾದರು. ಇದನ್ನು ಖಂಡಿಸಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರೂ ಸ್ಟೇಷನ್ ಮಾಸ್ಟರ್ ಮತ್ತು ಅವರ ಸಹೋದ್ಯೋಗಿಗಳು ಪ್ರತಿಕ್ರಿಯಿಸಲು ಅಸಮರ್ಥರಾದರು. ಇದು ಘರ್ಷಣೆಗೆ ಕಾರಣವಾಯಿತು. ಸೋಮವಾರ ಸಂಜೆ 6 ಗಂಟೆಗೆ ಘಟನೆ ನಡೆದಿದೆ.
ಮುಂಬೈನಿಂದ ತಿರುವನಂತಪುರ ಸೆಂಟ್ರಲ್‍ಗೆ ತೆರಳುವ ಎಕ್ಸ್‍ಪ್ರೆಸ್ ರೈಲು ಸಂಜೆ 5.40 ಕ್ಕೆ ನಿಲ್ದಾಣ ತಲುಪಿ ಐದು ನಿಮಿಷದಲ್ಲೇ ಪ್ರಯಾಣ ಮುಂದುವರಿಸಿತು. ರೈಲು ಸಂಜೆ 6.40 ಕ್ಕೆ ಕಾಸರಗೋಡು ತಲುಪಬೇಕಿತ್ತು. ಆದರೆ ನವೆಂಬರ್ 1 ರಿಂದ ರೈಲ್ವೆ ತನ್ನ ಪ್ರಯಾಣ ಸಮಯವನ್ನು ಬದಲಾಯಿಸಿತ್ತು. ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ. ಎಲ್ಲರೂ ಆನ್ ಲೈನ್‍ನಲ್ಲಿ ರೈಲು ಟಿಕೆಟ್‍ಗಳನ್ನು ಕಾಯ್ದಿರಿಸಿದವರಾಗಿದ್ದರು. ಆದರೆ ಸಮಯದ ಬದಲಾವಣೆ ಅನೇಕರಿಗೆ ತಿಳಿದಿರಲಿಲ್ಲ. ಹೆಚ್ಚಿನವರಿಗೆ ಸಂದೇಶಗಳೂ ಬಂದಿರಲಿಲ್ಲ ಎನ್ನಲಾಗಿದೆ.
ಆಗಮಿಸಿದ ರೈಲು ಮೂರು ನಿಮಿಷಗಳ ಬಳಿಕ ರೈಲ್ವೆ ನಿಲ್ದಾಣದಿಂದ ಹೊರಟಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಂಜೆ 6 ಗಂಟೆಯ ನಂತರ ರೈಲು ರೈಲ್ವೆ ನಿಲ್ದಾಣವನ್ನು ತಲುಪಿದಾಗ ಪ್ರಯಾಣಿಕರಿಗೆ ರೈಲು ನಿಲ್ದಾಣ ಬಿಟ್ಟ ಬಗ್ಗೆ ತಿಳಿಯಿತು. ನಂತರ, ಪ್ರಯಾಣಿಕರೆಲ್ಲರೂ ಸಂಘಟಿತರಾಗಿ ಪ್ರತಿಭಟನೆ ನಡೆಸಿದರು. ಪೆÇಲೀಸರು ಪ್ರಯಾಣಿಕರನ್ನು ಮನವೊಲಿಸಲು ಪ್ರಯತ್ನಿಸಿದರು. ಪ್ರಯಾಣಿಕರಲ್ಲಿ ಅನೇಕರು ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಪ್ರಯಾಣ ಗೊಂದಲಗೊಂಡಿದ್ದರಿಂದ ಕೆಲವರು ಟ್ಯಾಕ್ಸಿಗಳಲ್ಲಿ ಪ್ರಯಾಣ ಮುಂದುವರಿಸಿದರು.