ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅನುಭವಿಸಿದ ಸೋಲನ್ನು ಒಪ್ಪಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿರುವ ಹೊರತಾಗಿಯೂ, ಅಧ್ಯಕ್ಷೀಯ ಪದವಿಯನ್ನು ಸ್ವೀಕರಿಸುವ ನಿಟ್ಟಿನಲ್ಲಿ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಹೇಳಿದ್ದಾರೆ.
''ಅಧಿಕಾರ ಸ್ವೀಕಾರದ ಸಿದ್ಧತೆಗಳನ್ನು ನಾವು ಈಗಾಗಲೇ ಆರಂಭಿಸಿದ್ದೇವೆ. ನಮ್ಮ ವಿಜಯವನ್ನು ಮಾನ್ಯ ಮಾಡಲು ಹಾಲಿ ಆಡಳಿತವು ವಿಫಲವಾದರೂ ಅದು ವಾಸ್ತವವನ್ನು ಬದಲಿಸುವುದಿಲ್ಲ'' ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ನಮ್ಮ ಅಧಿಕಾರ ಸ್ವೀಕಾರಕ್ಕೆ ಟ್ರಂಪ್ ಎಷ್ಟೇ ತಡೆಯೊಡ್ಡಿದರೂ, ನಾನು ದಿನಗಳೆದಂತೆ ಅಧ್ಯಕ್ಷೀಯ ಪದವಿಯತ್ತ ದಾಪುಗಾಲಿಡುತ್ತಿದ್ದೇನೆ ಎಂದರು.
ಅಧಿಕಾರ ಹಸ್ತಾಂತರ ಸುಗಮ; ಟ್ರಂಪ್ ಮುಂದುವರಿಕೆ!: ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಬಳಿಕ ಸುಗಮ ಅಧಿಕಾರ ಹಸ್ತಾಂತರವಾಗುತ್ತದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಂಗಳವಾರ ಜಗತ್ತಿಗೆ ಭರವಸೆ ನೀಡಿದ್ದಾರೆ.
ಆದರೆ, ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ರ ಗೆಲುವನ್ನು ಅಂಗೀಕರಿಸಲು ನಿರಾಕರಿಸಿದ ಅವರು, ಡೊನಾಲ್ಡ್ ಟ್ರಂಪ್ ಅವರೇ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದು ಘೋಷಿಸಿದರು.
''ಎರಡನೇ ಟ್ರಂಪ್ ಆಡಳಿತಕ್ಕೆ ಸುಗಮ ಅಧಿಕಾರ ಹಸ್ತಾಂತರವಾಗುತ್ತದೆ'' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಪಿಯೊ ಹೇಳಿದರು.
''ವಿದೇಶಾಂಗ ಇಲಾಖೆಯು ಸಕ್ರಿಯವಾಗಿರುವುದಕ್ಕೆ ಅಗತ್ಯವಾದ ಅಧಿಕಾರ ಹಸ್ತಾಂತರ ನಡೆಯುತ್ತದೆ ಎಂಬ ಬಗ್ಗೆ ಜಗತ್ತು ನಂಬಿಕೆ ಇಡಬೇಕು. ಈಗ ಅಧಿಕಾರದಲ್ಲಿರುವ ಅಧ್ಯಕ್ಷರೇ ಜನವರಿ 20ರ ನಡು ಹಗಲು ಹೊಸದಾಗಿ ಅಧಿಕಾರದ ಪ್ರಮಾಣವಚನ ಸ್ವೀಕರಿಸುತ್ತಾರೆ'' ಎಂದರು.