ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಏರಿಕೆ ಮತ್ತು ಮುಂದಿನ ವಾರಗಳಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಚಳಿಗಾಲ ಮತ್ತು ಬಜೆಟ್ ಅಧಿವೇಶನಗಳ ಬದಲು ಸಂಸತ್ ನ ಒಂದೇ ವಿಸ್ತೃತ ಅಧಿವೇಶನ ನಡೆಸಲು ಸರ್ಕಾರ ಅವಲೋಕಿಸುತ್ತಿದೆ.
ಈ ಕುರಿತಂತೆ ಸರ್ಕಾರಿ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದು ಇನ್ನೂ ಅಂತಿಮಗೊಂಡಿಲ್ಲ ಎಂದು ಮಂಗಳವಾರ ಮೂಲಗಳು ತಿಳಿಸಿವೆ.ಸಂಸತ್ ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರದಿಂದ ಅಥವಾ ಡಿಸೆಂಬರ್ ಮೊದಲ ವಾರದಿಂದ ಆರಂಭವಾಗುತ್ತದೆ. ಆದರೆ ಬಜೆಟ್ ಅಧಿವೇಶನ ಜನವರಿ ಕೊನೆಯ ವಾರದಿಂದ ಆರಂಭವಾಗುತ್ತದೆ.ಕೇಂದ್ರ ಬಜೆಟ್ ನ್ನು ಫೆ.1 ರಂದು ಮಂಡಿಸಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕದ ನಡುವೆ ಸೆ 14 ರಿಂದ ನಡೆದ ಸಂಸತ್ ಮುಂಗಾರು ಅಧಿವೇಶನವನ್ನು ಎಂಟು ದಿನಗಳವರೆಗೆ ಮೊಟಕುಗೊಳಿಸಿ ಸೆ 24 ರಂದು ಕೊನೆಗೊಳಿಸಲಾಗಿತ್ತು.
ನೀತಿ ಆಯೋಗದ ಮೌಲ್ಯಮಾಪನದಂತೆ, ದೆಹಲಿಯಲ್ಲಿ ತೀವ್ರ ಹದಗೆಟ್ಟ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಮುಂಬರುವ ವಾರಗಳಲ್ಲಿ ಇದು ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಹೊಸ ಕೋವಿಡ್ ಪ್ರಕರಣಗಳು ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ 500 ಕ್ಕೆ (ಅಂದರೆ,ದಿನಕ್ಕೆ ಸುಮಾರು 10,000 ಹೊಸ ಪ್ರಕರಣಗಳು) ಏರುವ ಆತಂಕವಿದೆ.
ಸದ್ಯ ಈ ಪ್ರಮಾಣ ಪ್ರತಿ ಹತ್ತು ಲಕ್ಷಕ್ಕೆ ಸುಮಾರು 361 ರಷ್ಟಿದೆ. ಅಂದರೆ, ಶೇ 40ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಬ್ಬದ ದಿನಗಳಲ್ಲಿ ಕೊರೊನಾವೈರಸ್ ತಡೆಯ ನಿಯಮಗಳ ಉಲ್ಲಂಘನೆಯಿಂದ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಎಂದು ನೀತಿ ಆಯೋಗದ ಮೌಲ್ಯಮಾಪನ ವರದಿ ತಿಳಿಸಿದೆ.