ನವದೆಹಲಿ: ಗಡಿ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ-ಚೀನಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಟೀಕಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಲ್‌ಎಸಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಭಾರತದ ಭೂಭಾಗದೊಳಗೆ ಪಿಎಲ್‌ಎ ಪ್ರವೇಶಿಸಿಯೇ ಇಲ್ಲ ಎಂದು ಹೇಳಿದ್ದಾರೆ.
ಎಲ್‌ಎಸಿಗೆ ಸಂಬಂಧಿಸಿದಂತೆ ಚೀನಾದೊಂದಿಗೆ ಉಂಟಾಗಿದ್ದ ಬಿಕ್ಕಟ್ಟನ್ನು ಸರ್ಕಾರ ಸರಿಪಡಿಸಿದೆ. ಈಗ ಪರಿಸ್ಥಿತಿಯು ನಮ್ಮ ನಿಯಂತ್ರಣದಲ್ಲಿದೆ. ಭಾರತದ ಭೂಪ್ರದೇಶದೊಳಗೆ ಚೀನಾದ ಪಡೆಗಳು ಪ್ರವೇಶ ಮಾಡಿವೆ ಎಂಬ ಹೇಳಿಕೆಗಳು ಸಂಪೂರ್ಣ ಆಧಾರರಹಿತ ಎಂದು ಅವರು ಟೆಲಿವಿಷನ್ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ. ಭಾರತದ ಗಡಿಯೊಳಗೆ ಆಕ್ರಮಿಸಿರುವ ಚೀನಾ ಪಡೆಗಳು ನೂರಾರು ಚದರ ಕಿಮೀ ಭಾಗವನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಚೀನಾದೊಂದಿಗೆ ಕಮಾಂಡರ್ ಮಟ್ಟದ ಮಾತುಕತೆ ನಡೆಯುತ್ತಿದೆ. ಅದು ಯಾವಾಗ ಬಗೆಹರಿಯುವುದೋ ನಮಗೆ ತಿಳಿದಿಲ್ಲ. ಆದರೆ ನಾವು ಪ್ರಯತ್ನ ಮುಂದುವರಿಸಿದ್ದೇವೆ. ದೇಶದ ಭದ್ರತಾ ಹಿತಾಸಕ್ತಿಯಿಂದ ಎಲ್ಲ ಮಾಹಿತಿಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
'1962 ರಿಂದ 2013ರವರೆಗೆ ಏನೇನು ನಡೆದಿವೆಯೋ ಅವುಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಎಲ್‌ಎಸಿಯಲ್ಲಿ ನಮ್ಮಪಡೆಗಳು ಅದ್ಭುತ ಶೌರ್ಯ ಮೆರೆದಿವೆ. ಪಿಎಲ್‌ಎ ನಮ್ಮ ಭೂಭಾಗದೊಳಗೆ ಪ್ರವೇಶಿಸಿದೆ ಎಂಬುದು ಆಧಾರರಹಿತ. ಗಲ್ವಾನ್ ಸಂಘರ್ಷದ ಬಳಿಕ ನಾನು ನಮ್ಮ ಸೈನಿಕರನ್ನು ಭೇಟಿಯಾಗಿದ್ದೇನೆ. ನಮ್ಮ ಪ್ರಧಾನಿ ಕೂಡ ಸೈನಿಕರನ್ನು ಭೇಟಿಯಾಗಿದ್ದಾರೆ. ನಮ್ಮ ಭೂಮಿಯನ್ನು ಪ್ರವೇಶಿಸಲು ಯಾರಿಗೂ ಪ್ರಯತ್ನ ಸಹ ಮಾಡಲು ಆಗುವಿಲ್ಲ ಎಂದು ಹೇಳಬಲ್ಲೆ' ಎಂದು ರಾಜನಾಥ್ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್-ಬಲ್ಟಿಸ್ತಾನ್‌ಗೆ ವಿಶೇಷ ಪ್ರಾಂತೀಯ ಮಾನ್ಯತೆ ನೀಡಿದ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಜನಾಥ್ ಸಿಂಗ್, 'ಗಿಲ್ಗಿಟ್ ಬಲ್ಟಿಸ್ತಾನ ಭಾರತಕ್ಕೆ ಸೇರಿವೆ. ಅವುಗಳ ಸ್ಥಿತಿಯಲ್ಲಿನ ಬದಲಾವಣೆಗಳನ್ನು ನಾವು ಒಪ್ಪುವುದಿಲ್ಲ. 370ನೇ ವಿಧಿ ರದ್ದತಿ ಬಳಿಕ ಪಾಕಿಸ್ತಾನ ಹತಾಶೆಗೊಂಡಿದೆ' ಎಂದು ಟೀಕಿಸಿದ್ದಾರೆ.