ಪಟ್ನಾ: ಬಿಹಾರ ಚುನಾವಣೆ ಫಲಿತಾಂಶದ ಇತ್ತೀಚಿನ ಟ್ರೆಂಡ್ ಹೊರತಾಗಿಯೂ ಮಹಾಘಟಬಂಧನವೇ ಚುನಾವಣೆಯಲ್ಲಿ ಜಯಿಸಿ ಸರ್ಕಾರ ರಚಿಸಲಿದೆ ಎಂದು ಆರ್‌ಜೆಡಿ ಭರವಸೆ ವ್ಯಕ್ತಪಡಿಸಿದೆ. ತಮ್ಮ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಂದ ದೊರೆತಿರುವ ಮಾಹಿತಿ ಪ್ರಕಾರ ಮಹಾಘಟಬಂಧನವೇ ಜಯ ಗಳಿಸಲಿದೆ ಎಂದು ಆರ್‌ಜೆಡಿ ಹೇಳಿದೆ.
ಸಂಜೆ 5 ಗಂಟೆ ವರೆಗಿನ ಮಾಹಿತಿ ಪ್ರಕಾರ ಎನ್‌ಡಿಎ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ ಹಿನ್ನಡೆ ಅನುಭವಿಸಿದೆ.
'ಎಲ್ಲ ಪ್ರದೇಶಗಳಲ್ಲಿರುವ ನಮ್ಮ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳ ಸಂಪರ್ಕದಲ್ಲಿದ್ದೇವೆ. ಅವರಿಂದ ದೊರೆತ ಮಾಹಿತಿ ಪ್ರಕಾರ, ಫಲಿತಾಂಶ ನಮ್ಮ ಪರ ಬರಲಿದೆ' ಎಂದು ಆರ್‌ಜೆಡಿ ಟ್ವೀಟ್ ಮಾಡಿದೆ.
ಮತ ಎಣಿಕೆ ಪ್ರಕ್ರಿಯೆ ತಡರಾತ್ರಿಯವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಕೋವಿಡ್ -19 ಸಾಂಕ್ರಾಮಿಕದ ಕಾರಣ ಕೇಂದ್ರದ ಮಾರ್ಗಸೂಚಿಗಳ ಅನುಸಾರ ಮತ ಎಣಿಕೆ ನಡೆಯುತ್ತಿರುವುದರಿಂದ ಪ್ರಕ್ರಿಯೆ ನಿಧಾನವಾಗಿದೆ.
'ಮಹಾಘಟಬಂಧನ ಸರ್ಕಾರ ರಚನೆಯಾಗುವುದು ನಿಶ್ಚಿತ. ಬಿಹಾರ ಬದಲಾವಣೆ ಬಯಸಿದೆ' ಎಂದು ಆರ್‌ಜೆಡಿ ಹೇಳಿದೆ.
ಎಣಿಕೆ ಪ್ರಕ್ರಿಯೆ ಮುಗಿಯುವ ವರೆಗೂ ಮತ ಎಣಿಕೆ ಕೇಂದ್ರಗಳಲ್ಲಿಯೇ ಇರುವಂತೆ ಅಭ್ಯರ್ಥಿಗಳಿಗೆ ಮತ್ತು ಏಜೆಂಟ್‌ಗಳಿಗೆ ಪಕ್ಷವು ಸೂಚಿಸಿದೆ.
ಈ ಬಾರಿ ಶೇ 63ರಷ್ಟು ಎಲೆಕ್ಟ್ರಾನಿಕ್ ಮತ ಯಂತ್ರಗಳ ಸಂಖ್ಯೆ ಏರಿಕೆಯಾದ ಕಾರಣ, ತಡರಾತ್ರಿಯವರೆಗೂ ಮತ ಎಣಿಕೆ ಕಾರ್ಯ ಮುಂದುವರಿಯಲಿದೆ ಎಂದು ಚುನಾವಣಾ ಆಯುಕ್ತರು ಮಧ್ಯಾಹ್ನವೇ ತಿಳಿಸಿದ್ದರು.