ಪಾಟ್ನಾ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಎನ್ ಡಿಎಗೆ ಸ್ಪಷ್ಟ ಬಹುಮತ ಸಿಕ್ಕಿದೆ.
ಬಿಹಾರ ಚುನಾವಣೆ ಫಲಿತಾಂಶದಲ್ಲಿ ನಿನ್ನೆ ಬೆಳಗ್ಗಿನಿಂದ ಹಾವು ಏಣಿ ಆಟ ಶುರುವಾಗಿತ್ತು. ಆರಂಭದಿಂದ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ ಸಾಧಿಸಿದ್ದರೂ, ಸರಳ ಬಹುಮತದಿಂದ ಕುಸಿಯುತ್ತಿತ್ತು. ಇದೀಗ ಅಂತಿಮವಾಗಿ ಎನ್ ಡಿಎ 125 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಪಕ್ಷಗಳ ನಡುವಿನ ಸ್ಪರ್ಧೆಯಲ್ಲಿ ಆರ್ ಜೆಡಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೌದು ಆರ್ ಜೆಡಿ ಬರೋಬ್ಬರಿ 75 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಳೆದ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಫಲಿತಾಂಶದ ಆರಂಭದಲ್ಲಿ 80 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದ ಅಂತಿಮವಾಗಿ ಬಿಜೆಪಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡು 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನು ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ನಾಲ್ಕನೇ ಸ್ಥಾನದಲ್ಲಿದೆ.
ಕಳೆದ 2015ರ ಬಿಹಾರ ಚುನಾವಣೆಯಲ್ಲಿ ಜೆಡಿಯು 71 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಜೆಡಿಯು 43 ಕ್ಷೇತ್ರಕ್ಕೆ ಕುಸಿದಿದೆ. ಕಳೆದ ಬಾರಿ 53 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಇಂದು 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.