ಮಂಜೇಶ್ವರ: ಮೀಯಪದವು ಅಯ್ಯಪ್ಪ ಭಜನಾ ಮಂದಿರ ಬ್ರಹ್ಮಕಲಶ ಪೂರ್ವಸಿದ್ಧತಾ ವಿಶೇಷ ಸಭೆ ಕೊಂಡೆವೂರು ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಅಯ್ಯಪ್ಪ ಭಜನಾಮಂದಿರ ವಠಾರದಲ್ಲಿ ಜರಗಿತು.
ಶ್ರೀ ಅಯ್ಯಪ್ಪ ಸೇವಾಸಂಘ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೀಧರ ರಾವ್ ಆರ್ ಎಂ , ಕಾಯಾಧ್ಯಕ್ಷ ಸುಬ್ಬಣ್ಣ ಆಳ್ವ ಬಾನಬೆಟ್ಟು, ಕೋಶಾಧಿಕಾರಿ ಸದಾಶಿವ ರಾವ್ ಟಿ ಡಿ, ಪ್ರಧಾನಕಾರ್ಯದರ್ಶಿ ಸದಾನಂದ ರೈ ಕಳ್ಳಿಗೆಬೀಡು, ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಮಂದಿರ ಗುರು ಸ್ವಾಮಿ ರಂಜಿತ್ ಕೋಡಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭ ಮಾರ್ಗದರ್ಶನ ಆಶೀರ್ವಚನ ನೀಡಿದ ಸ್ವಾಮೀಜಿ ಭಜನಾ ಮಂದಿರ ಸಮಾಜದ ಕಣ್ಣು, ದೇವರ ಅನುಗ್ರಹ ಪಡೆಯಲು ಭಜನೆ ಸರಳ ವಿಧಾನ ಅಂತಹ ಭಜನಾಮಂದಿರ ಪುನಃನಿರ್ಮಾಣದಲ್ಲಿ ಎಲ್ಲರೂ ಅರ್ಪಣಾ ಭಾವದಿಂದ ದುಡಿಯ ಬೇಕಿದೆ. ದೇವರಿಗೆ ಬಡವ ಬಲ್ಲಿದ ಈರ್ವರೂ ಸಮಾನರೆ. ದೇವರಿಗೆ ನಮ್ಮನ್ನು ನಾವು ಸಮರ್ಪಿಸಿ ಕೊಂಡಾಗ ಬಾಳನಲ್ಲಿ ನೆಮ್ಮದಿ ಶಾಂತಿ ದೊರೆಯುತ್ತದೆ, ವಿಷ್ಣು ಸಹಸ್ರನಾಮಕ್ಕೆ ಅದಮ್ಯವಾದ ಶಕ್ತಿಯಿದೆ. ಅಂತಹ ಸಹಸ್ರನಾಮ ಪಾರಾಯಣ ಮಂದಿರದಲ್ಲಿ ನಿರಂತರ ನಡೆಸುತ್ತಿರುವುದರಿಂದಲೇ ನಾಡಿಗೆ ಕೊರೊನಾದಂತಹ ಮಹಾಮಾರಿ ಬಾಧಿಸಿದಾಗಲೂ ಮೀಯಪದವು ಅಯ್ಯಪ್ಪಮಂದಿರ ಜೀರ್ಣೋದ್ಧಾರ ಕಾರ್ಯ ನಿರಂತರ ಸಾಗಿ ಸಮಾಜ ಅಚ್ಚರಿಪಡುವಂತೆ ಬ್ರಹ್ಮಕಲಶಕ್ಕೆ ಸಿದ್ಧಗೊಳ್ಳುತ್ತಿದೆ ಎಂದು ಪ್ರೋತ್ಸಾಹ ದಾಯಕ ಮಾತನ್ನಾಡಿದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ನಿಯಮ ರೀತಿಗಳನ್ನು ಗಮನಿಸಿ ಬ್ರಹ್ಮಕಲಶ ದಿನಾಂಕ ನಿಶ್ಚಯಿಸಲು ತೀರ್ಮಾನಿಸಲಾಯಿತು. ಹಾಗೂ ಮಂದಿರದಲ್ಲಿ ದೇವರ ರಜತ ಚಿತ್ರವನ್ನು ದಾನಿಗಳ ನೆರವಲ್ಲಿ ಸ್ಥಾಪಿಸಲು ನಿರ್ಣಯಿಸಲಾಯಿತು.
ದೇವರ ರಜತಚಿತ್ರ ನಿರ್ಮಾಣಕ್ಕೆ ಮೊದಲ ದೇಣಿಗೆಯಾಗಿ ಕೂಡ್ಲು ಗೋಪಾಲಕೃಷ್ಣ ಶೆಟ್ಟಿ ತಮ್ಮ ಮೊಮ್ಮಕ್ಕಳ ಬಾಬ್ತು ನೂರು ಗ್ರಾಂ ಬೆಳ್ಳಿ ಹಾಗೂ ಕೃಷ್ಣ ಪ್ರಸಾದ ಆಳ್ವ ಮುನ್ನಿಪ್ಪಾಡಿ ಇನ್ನೂರ ಐವತ್ತು ಗ್ರಾಂ ಬೆಳ್ಳಿ ನೀಡಿದರು.
ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಟಿ ಡಿ ಸದಾಶಿವರಾವ್ ಸ್ವಾಗತಿಸಿ, ಕಾರ್ಯದರ್ಶಿ ರಾಜಾರಾಮ ರಾವ್ ಮೀಯಪದವು ನಿರೂಪಿಸಿ ಪುಷ್ಪರಾಜ ಶೆಟ್ಟಿ ತಲೇಕಳ ಸ್ಥಳೀಯ ಸಮಿತಿಗಳನ್ನು ಘೋಷಿಸಿದರು. ಕಾರ್ಯದರ್ಶಿ ತಿಮ್ಮಪ್ಪ ಮೈತಾಳ್ ವಂದಿಸಿದರು.