ಹೊಸದಿಲ್ಲಿ: ಕೊರೋನ ಸೋಂಕಿಗೆ ಲಸಿಕೆ ಲಭ್ಯವಾದರೂ ಸೋಂಕಿನ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳು ಮುಂದುವರಿಯಲಿವೆ . ಜನರು ಮಾಸ್ಕ್ ಧರಿಸುವುದನ್ನು ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ನ ಪ್ರೊಫೆಸರ್ ಬಲರಾಮ್ ಭಾರ್ಗವ ಹೇಳಿದ್ದಾರೆ.
ಮಾಸ್ಕ್‌ಗಳು ಎಂದಿಗೂ ಹೋಗುವ ಸಾಧ್ಯತೆಯಿಲ್ಲ. ಲಸಿಕೆಯು ಕೊರೋನ ವಿರುದ್ಧ ಸ್ವಲ್ಪ ಮಟ್ಟಿನ ರಕ್ಷಣೆ ಒದಗಿಸಿದರೂ ಮಾಸ್ಕ್ ಧಾರಣೆ ಮುಂದುವರಿಸಲೇ ಬೇಕು. ಸುರಕ್ಷಿತ ಅಂತರ ಸೇರಿದಂತೆ ಕೊರೋನ ನಿಯಮಗಳು ಮುಂದುವರಿಯಲಿವೆ. ಆದರೆ ಮತ್ತೊಮ್ಮೆ ದೇಶದಾದ್ಯಂತ ಲಾಕ್‌ಡೌನ್ ವಿಧಿಸುವ ಸಾಧ್ಯತೆಯಿಲ್ಲ ಎಂದವರು ಹೇಳಿದ್ದಾರೆ. ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿವಿ ನಡೆಸಿದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.
ಭಾರತವು ತನಗೆ ಮಾತ್ರವಲ್ಲ, ಶೇ 60% ಅಭಿವೃದ್ಧಿಶೀಲ ದೇಶಗಳಿಗೂ ಲಸಿಕೆಯನ್ನು ಪೂರೈಸಲಿದೆ. ದೇಶದಲ್ಲಿ 24 ಉತ್ಪಾದನಾ ಘಟಕ ಹಾಗೂ 19 ಸಂಸ್ಥೆಗಳು ಕೋವಿಡ್-19ರ ವಿರುದ್ಧದ ಲಸಿಕೆ ತಯಾರಿಕೆಯಲ್ಲಿ ನಿರತವಾಗಿದ್ದು ಮುಂದಿನ ವರ್ಷದ ಜುಲೈಯೊಳಗೆ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಲಸಿಕೆ ಲಭ್ಯವಾದ ಬಳಿಕ ಮುಂದಿನ ಕ್ರಮಗಳನ್ನು ರೂಪಿಸಲಾಗುತ್ತದೆ ಎಂದು ಪ್ರೊಫೆಸರ್ ಭಾರ್ಗವ ಹೇಳಿದ್ದಾರೆ. ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೊರೋನ ಸೋಂಕಿನ ವಿರುದ್ಧ ಲಸಿಕೆ ತಯಾರಿಸುವ ಕಾರ್ಯ ಪ್ರಗತಿಯಲ್ಲಿದ್ದು ಶನಿವಾರ ಸಂಸ್ಥೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಲಸಿಕೆ ಅಭಿವೃದ್ಧಿಯ ಕುರಿತು ಮಾಹಿತಿ ಪಡೆದರು ಎಂದು ಮೂಲಗಳು ಹೇಳಿವೆ.