ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೋವಿಡ್ ರೋಗಿಗಳಿಗೆ ನೇರವಾಗಿ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ. ಚುನಾವಣಾ ದಿನದಂದು ಅಥವಾ ಮೊದಲು, ಕೋವಿಡ್ ಸಹಿತ ಇತರ ರೋಗದಿಂದ ಬಳಲುತ್ತಿರುವವರಿಗೆ ಮತ್ತು ಸಂಪರ್ಕತಡೆಯನ್ನು ಹೊಂದಿರುವವರಿಗೆ ಮತ ಚಲಾಯಿಸಲು ಅವಕಾಶವನ್ನು ಒದಗಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ಕೇರಳ ಪುರಸಭೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿತು.
ಪ್ರಸ್ತುತ ಕಾನೂನಿನ ಪ್ರಕಾರ, ಮತದಾನ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಇರುತ್ತದೆ. ಮತದಾನದ ಕೊನೆಯ ಗಂಟೆಯನ್ನು (ಸಂಜೆ 5 ರಿಂದ 6 ರವರೆಗೆ) ಸೋಂಕಿತರಿಗೆ ಮತ್ತು ಮತದಾನದಿಂದ ನಿರ್ಬಂಧಿತರಾದವರಿಗೆ(ಸಂಪರ್ಕ ತಡೆ ಇರುವವರು) ಮೀಸಲಿಡಲು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮತ್ತು ಸಂಪರ್ಕತಡೆಯಲ್ಲಿರುವವರಿಗೆ ಅಂಚೆ ಮತದಾನ ಮುಕ್ತವಾಗಿದೆ. ಆದರೂ ಸೋಂಕಿತರು ಅಂಚೆ ಮತನಾನಕ್ಕೆ ಇರುವ ತಮ್ಮ ಅರ್ಜಿಯನ್ನು ಮೂರು ದಿನಗಳ ಮೊದಲು ಅಥವಾ ರಾಜ್ಯ ಚುನಾವಣಾ ಆಯೋಗವು ನಿಗದಿಪಡಿಸಿದ ಸಮಯದಲ್ಲಿ ರಿಟನಿರ್ಂಗ್ ಅಧಿಕಾರಿಗೆ ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸುವುದರ ಜೊತೆಗೆ, ಅಂಚೆ ಮತದೊಂದಿಗೆ ಗುರುತಿಸಲಾದ ಮತದಾರರ ಪಟ್ಟಿಯನ್ನು ಮತದಾನದ ದಿನಕ್ಕೆ ಎರಡು ದಿನಗಳ ಮೊದಲು ಸ್ಟ್ಯಾಂಪ್ ಮಾಡಬೇಕು. ಆದರೆ ಚುನಾವಣಾ ದಿನ ಅಥವಾ ಎರಡು ದಿನಗಳ ಮೊದಲು ಅನಾರೋಗ್ಯಕ್ಕೆ ಒಳಗಾದವರಿಗೆ ಈ ಕಾನೂನಿನಡಿಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಅನಾರೋಗ್ಯ ಮತ್ತು ಸಂಪರ್ಕದಲ್ಲಿರುವವರಿಗೆ ನೇರವಾಗಿ ಮತ ಚಲಾಯಿಸಲು ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ.
ಕೋವಿಡ್ ಪೀಡಿತರಿಗೆ ಮತ್ತು ಸಂಪರ್ಕ ನಿಯಂತ್ರಣವಿರುವವರಿಗೆ ಮತದಾನ ಕೇಂದ್ರಗಳಲ್ಲಿ ಒದಗಿಸಬೇಕಾದ ವಿಶೇಷ ಸೌಲಭ್ಯಗಳ ಬಗ್ಗೆ ಆರೋಗ್ಯ ಇಲಾಖೆಗೆ ವಿಶೇಷ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಮತ್ತು ಅದನ್ನು ಸ್ಥಳೀಯಾಡಳಿತ ಇಲಾಖೆಗೆ ನೀಡಲು ಕ್ಯಾಬಿನೆಟ್ ನಿರ್ಧರಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಏಜೆಂಟರಿಗೆ ವಿಶೇಷ ರಕ್ಷಣೆ ನೀಡುವ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಆರೋಗ್ಯ ಇಲಾಖೆಗೆ ಸಚಿವ ಸಂಪುಟ ನಿರ್ದೇಶನ ನೀಡಿದೆ.