ಬೆಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ನಾರಾಯಣ್ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರವನ್ನು ಹಿಂಪಡೆಯಲು ನಿನ್ನೆ ಕೊನೆಯ ದಿನವಾಗಿತ್ತು. ನಾರಾಯಣ್ ಹೊರತುಪಡಿಸಿ ಬೇರೆ ಯಾವ ಅಭ್ಯರ್ಥಿಯೂ ಕಣದಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕುಟುಂಬ ಸದಸ್ಯರ ಜೊತೆಗೆ ವಿಧಾನಸೌಧಕ್ಕೆ ಆಗಮಿಸಿದ ನಾರಾಯಣ್ ಅವರಿಗೆ ವಿಧಾನಸಭಾ ಕಾರ್ಯದರ್ಶಿ ಎಂ.ವಿಶಾಲಾಕ್ಷಿ ಪ್ರಮಾಣಪತ್ರವನ್ನು ನೀಡಿದರು.
ಪ್ರಸಕ್ತ ಸಾಲಿನ ಜೂನ್‍ನಲ್ಲಿ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆಯಲ್ಲಿ ಬಿಜೆಪಿಯ ಅಶೋಕ್ ಗಸ್ತಿ, ಈರಣ್ಣ ಕಡಾಡಿ, ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ಪಕ್ಷದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದರು.
ಆದರೆ, ಕೊರೋನ ಸೋಂಕು ತಗುಲಿ ಅನಾರೋಗ್ಯಕ್ಕೀಡಾಗಿದ್ದ ಅಶೋಕ್ ಗಸ್ತಿ, ಚಿಕಿತ್ಸೆ ಫಲಕಾರಿಯಾಗದೆ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಭಾರತೀಯ ಚುನಾವಣಾ ಆಯೋಗವು ಉಪ ಚುನಾವಣೆ ಘೋಷಿಸಿತ್ತು. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಬೇಕಿದ್ದ ಈ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಅಗತ್ಯ ಸಂಖ್ಯಾಬಲವನ್ನು ಹೊಂದಿಲ್ಲದೆ ಇರುವುದರಿಂದ, ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.