HEALTH TIPS

ಕಾಡು ಕರಗಿ ಗದ್ದೆಯಾದ ಅರಿಯಪ್ಪಾಡಿ ಮಾಡದಲ್ಲಿ ಚಿನ್ನದ ಬೆಳೆಯ ಕೊಯ್ಲೋತ್ಸವ..

     ಕುಂಬಳೆ:  ಲಾಕ್ಡೌನ್ ಕಾಲದ ಗೃಹಬಂಧನದಲ್ಲಿ ಮನೆಯಲ್ಲಿರದೇ ಬರಡು ಬಂಜರು ಭೂಮಿಯ ದಟ್ಟ ಕಾಡನ್ನು ಸಮತಟ್ಟು ಮಾಡಿ, ಕೃಷಿಯೋಗ್ಯ ಭೂಮಿಯನ್ನಾಗಿಸಿ ನೇಜಿನೆಟ್ಟ ಮುಂಡಿತ್ತಡ್ಕದ ಅರಿಯಪ್ಪಾಡಿಯ ಮಾಡದ ಅಂಗಳದಲ್ಲಿ ಚಿನ್ನದಂತ ಪೈರು  ಭರವಸೆಯಿಂದ ಬೆಳೆದಿದೆ. ಭಾನುವಾರ (ನ.1) ದೈವಗಳಿಗೆ ಪ್ರಾರ್ಥಿಸಿ ಅರಿಯಪ್ಪಾಡಿ ಎಂಬ ಹೆಸರನ್ನು ಅನ್ವರ್ಥವಾಗಿಸಿ,ಸಾರ್ಥಕಗೊಳಿಸಿದ ಗದ್ದೆಯಲ್ಲಿ ಪ್ರಥಮ ಕೊಯ್ಲು ಉತ್ಸವ ನಡೆಯಿತು, ನಾಡಿಗೆ ಹಬ್ಬವಾಯಿತು.

           ಅರಿಯಪ್ಪಾಡಿ ಈರ್ವರುಳ್ಳಾಕ್ಳು ದೈವಗಳ ಮಾಡ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳಾಯಿತಷ್ಟೇ. ಪೂರ್ವದಲ್ಲಿದು ದಟ್ಟ ಕಾನನ ಪ್ರದೇಶ. ಕಾಡನ್ನು ನಾಡಾಗಿಸಿ ಮಾಡವನ್ನು ಪುನರ್ ಸ್ಥಾಪಿಸಿರುವುದರಲ್ಲಿ ಸ್ಥಳೀಯ ತರುಣರ ಸಂಘಶಕ್ತಿ ಇದೆ. ಪ್ರಸಕ್ತ ಕೊರೋನಾ ಲಾಕ್ಡೌನ್ ಕಾಲದಲ್ಲಿ ನಾಡ ಜನರೆಲ್ಲರೂ ಮನೆಯಲ್ಲೇ ಬಂಧಿಯಾಗಿದ್ದಾಗ ಇಲ್ಲಿನ ಗೆಳೆಯರ ಬಳಗಕ್ಕೆ 'ಮಾಡ'ದ ಮುಂಭಾಗದ ದಟ್ಟ ಕಾಡನ್ನು ಗದ್ದೆಯಾಗಿಸಿ, ಭತ್ತ ಬೆಳೆಸುವ ಕಲ್ಪನೆ ಮೂಡಿತು. ಅವರು ಸಾಹಸಿಕವಾದ ಶ್ರಮಭರಿತ ಕಾಯಕಕ್ಕಿಳಿದರು. ಕಾಸರಗೋಡಿನ ರೋಟರಿ ಕ್ಲಬ್ ಇದಕ್ಕೆ ಸಹಾಯಹಸ್ತದ ನೆರವು ಚಾಚಿ ಕೈ ಜೋಡಿಸಿತು. ಪುತ್ತಿಗೆ ಪಂಚಾಯತಿ ಕೃಷಿ ಇಲಾಖೆಯೂ ಬೆಂಬಲ ನೀಡಿತು. ಪರಿಣಾಮ ದಟ್ಟ ಕಾಡು ಕರಗಿತು. ಬಂಜರು ನೆಲ ಬಂಗಾರದಂತ ಬೆಳೆ ಬೆಳೆಯುವ ಭೂಮಿಯಾಯಿತು.


       ಇಂಥ ನೆಲದಲ್ಲಿ ನೇಜಿ ನೆಟ್ಟದ್ದೇ ಒಂದು ಉತ್ಸವವಾಗಿತ್ತು. ಕಾರಣ...ಪಾಳು ಬಿದ್ದ ಗದ್ದೆಯಲ್ಲಿ ಮತ್ತೆ ಕೃಷಿ ಇಳಿಸುವುದೇನೂ ಸಾಹಸವಲ್ಲ. ಆದರೆ ಬಂಜರು ಭೂಮಿಯೊಂದನ್ನು ಗದ್ದೆಯಾಗಿಸುವುದೆಂದರೆ ಸುಲಭದ ಮಾತಲ್ಲ. ಇಷ್ಟಕ್ಕೂ ಇದು ಕೃಷಿಯೋಗ್ಯ ಭೂಮಿಯೇ ಅಲ್ಲ! ಆದರೆ  ಈ ನಾಡಿಗೆ ಹೆಸರು ಅರಿಯಪ್ಪಾಡಿ. ಅರಿ ಎಂದರೆ ತುಳುವಲ್ಲಿ ಅಕ್ಕಿ. ಅಕ್ಕಿ ಬೆಳೆಯುವ ಪಾಡಿಯೇ ಅರಿಯಪ್ಪಾಡಿ. ಶತಮಾನಗಳ ಹಿಂದೆ ಮಾಡ ಇದ್ದು, ಸುತ್ತಲೂ ಅಕ್ಕಿ ಬೆಳೆಯುವ ಗದ್ದೆಗಳ ಊರು ಇದಾಗಿತ್ತೆಂದು ಪ್ರತೀತಿ. ಆದರೆ ಕಾಲಾನಂತರದಲ್ಲಿ ಪಾಳು ಬಿದ್ದು ನಿರ್ನಾಮಗೊಂಡು, ದಟ್ಟಾರಣ್ಯದ ಬನವಾಗಿ ಪಲ್ಲಟಗೊಂಡಿದ್ದ ನೆಲ ಈಗ ಮತ್ತೆ ತನ್ನ ಹೆಸರನ್ನ ಸಾರ್ಥಕಗೊಳಿಸಿದೆ. ಅರಿಯಪ್ಪಾಡಿಯ ಅಂಗಳದಲ್ಲಿ ಚಿನ್ನದಂತೆ ಮೂಡಿದ ತೆನೆಯ ಕೊಯ್ಲು ನಡೆದು, ಫಲವೃಷ್ಟಿಯಾಗಿದೆ.

      ರಾಜ್ಯೋತ್ಸವ ದಿನವಾದ ನ.1ರಂದು  ನಾಡಜನತೆಯ ಉತ್ಸಾಹೋಲ್ಲಾಸದಲ್ಲಿ ನಡೆದ ಕೊಯ್ಲೋತ್ಸವದಲ್ಲಿ ಈರ್ವರುಕ್ಳಾಕ್ಲು ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ವೈ. ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ರೋಟರಿ ಕ್ಲಬ್ ಅಧ್ಯಕ್ಷ ಡಾ. ಜನಾರ್ಧನ ನಾಯ್ಕ್ ಉದ್ಘಾಟಿಸಿ ಜೈವಿಕ ಕೃಷಿ ಪುನರುತ್ತೇಜನದ ಕಾಯಕಕ್ಕೆ ಸಕಲ ಬೆಂಬಲಗಳ ಭರವಸೆ ಇತ್ತರು. ಪತ್ರಕರ್ತ ಎಂ.ನಾ. ಚಂಬಲ್ತಿಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿ ಈರ್ವರುಳ್ಳಾಕ್ಳು ಯುವಕಸಂಘದ ಕಾಯಕ ನಮ್ಮ ಜಿಲ್ಲೆಗೆ, ಇನ್ನಿತರ ದೇಗುಲಗಳಿಗೆ ಮಾದರಿ,ಪ್ರೇರಣೆ ಎಂದರು. ಮುಂದಿನ ವರ್ಷ ಈ ಯೋಜನೆ ಪರಿಸರದ ಊರಿನಲ್ಲಿ ವಿಸ್ತರಣೆಗೊಳ್ಳಲು, ಇತರರೂ ಇದನ್ನನುಸರಿಸಲು ಪ್ರಚೋದನೆ ನೀಡುವ ಕೆಲಸಗಳಾಗಬೇಕೆಂದರು.

      ರೋಟರಿ ಪದಾಧಿಕಾರಿಗಳಾದ ದಿನೇಶ್ ಎಂ.ಟಿ, ರಾಧಾಕೃಷ್ಣನ್, ಎಂ.ಅಶೋಕನ್ ಮತ್ತು ಈರ್ವರುಳ್ಳಾಕ್ಳು ದೈವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಸುಂದರ ಕಟ್ನಡ್ಕ, ಚಿದಾನಂದ ಆಳ್ವ, ಶಶಿಕುಮಾರ್ ಉಪಸ್ಥಿತರಿದ್ದು ಮಾತನಾಡಿದರು. ನವೀನ್ ಕುಮಾರ್ ಅರಿಯಪ್ಪಾಡಿ ಸ್ವಾಗತಿಸಿದರು. ರೋಟರಿ ಕ್ಲಬ್ ವತಿಯಿಂದ ಸಂಘಕ್ಕೆ ಸಹಾಯಧನ ಹಸ್ತಾಂತರವೂ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries