ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬೆನ್ನಲ್ಲೇ, ಮಹಾಘಟ ಬಂಧನ್ ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಆರ್ ಜೆಡಿ ಪಕ್ಷದ ಮುಖಂಡರೊಬ್ಬರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಮಹಾಮೈತ್ರಿಕೂಟಕ್ಕೆ ಮಹಾ ಸಂಕೋಲೆಯಾಗಿತ್ತು ಎಂದು ಆರ್ ಜೆಡಿ ಮುಖಂಡ ಶಿವಾನಂದ ತಿವಾರಿ ಕಿಡಿಕಾರಿದ್ದಾರೆ. 70 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕಾಂಗ್ರೆಸ್ 70 ರ‍್ಯಾಲಿ ಕೂಡಾ ಮಾಡಲಿಲ್ಲ. ರಾಹುಲ್ ಗಾಂಧಿ ಮೂರು ದಿನ ಬಂದರೆ, ಪ್ರಿಯಾಂಕಾ ಗಾಂಧಿ ಬರಲೇ ಇಲ್ಲ. ಬಿಹಾರ ಪರಿಚಯವೇ ಇಲ್ಲದವರು ಬಂದು ಪ್ರಚಾರ ಮಾಡಿ ಹೋದರು ಇದು,ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಚುನಾವಣೆ ಬಿರುಸಿನಿಂದ ಸಾಗುತ್ತಿರುವಾಗಲೇ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಮನೆ ಇರುವ ಶಿಮ್ಲಾ ಪ್ರವಾಸ ಕೈಗೊಂಡಿದ್ದರು. ಕಾಂಗ್ರೆಸ್ ನಡೆಯುತ್ತಿರುವುದೇ ಹಿಗೆಯೇ? ಅವರು ಪಕ್ಷ ನಡೆಸುತ್ತಿರುವ ರೀತಿಯಿಂದಲೇ ಬಿಜೆಪಿಗೆ ಲಾಭವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದು ಬಿಹಾರಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ, ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ. ಆದರೆ, ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಅದು ವಿಫಲವಾಗುತ್ತದೆ. ಇದರ ಬಗ್ಗೆ ಕಾಂಗ್ರೆಸ್ ಚಿಂತಿಸಬೇಕಾಗಿದೆ ಎಂದು ತಿವಾರಿ ಸಲಹೆ ನೀಡಿದ್ದಾರೆ.