ಬೆಂಗಳೂರು: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ ಟಿ ಬಿ ಸೊಲಬಕ್ಕನವರ್ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ, ಅವರಿಗೆ 73 ವರ್ಷ ವಯಸ್ಸಾಗಿತ್ತು.
ಉತ್ತರ ಕರ್ನಾಟಕದ ಶಿಗ್ಗಾವಿಯ ಪ್ರಸಿದ್ಧ ಉತ್ಸವ ರಾಕ್ ಗಾರ್ಡನ್ ನ ರೂವಾರಿ ಸೊಲಬಕ್ಕನವರ್ ಮೂಲತಃ ಶಿಕ್ಷಕರು. ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ವಿಶೇಷ ಆಸಕ್ತಿ ಮತ್ತು ಕಾಳಜಿ ಹೊಂದಿದ್ದ ಸೊಲಬಕ್ಕನವರ್ ಅಣುಶಕ್ತಿ ಯುದ್ಧ ನಿಲ್ಲಿಸಿ ಎಂಬ 120 ಅಡಿ ಉದ್ದದ ತೈಲ ವರ್ಣಚಿತ್ರದ ಕುರಿತು ಕರ್ನಾಟಕದಾದ್ಯಂತ ಸುತ್ತಾಡಿ ಜನಪ್ರಿಯರಾಗಿದ್ದಾರೆ.
ದೊಡ್ಡಾಟ, ಶಿಲ್ಪ ಕಲಾಕೃತಿಗಳಲ್ಲಿನ ಇವರ ವಿಶೇಷ ಆಸಕ್ತಿ, ಪ್ರತಿಭೆ ಗಮನಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಕೇಂದ್ರಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2002ರಲ್ಲಿ ಅತ್ಯುತ್ತಮ ಕಲಾ ತರಬೇತಿ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ.
ಮೃತರ ಅಂತ್ಯಸಂಸ್ಕಾರ ಅವರ ಹುಟ್ಟೂರು ಗ್ರಾಮ ಹಾವೇರಿ ಜಿಲ್ಲೆಯ ಗೊಟಗುಡಿಯಲ್ಲಿ ಅಂದು ಅಪರಾಹ್ನ ನೆರವೇರಲಿದೆ.