ಕಾಸರಗೋಡು: ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಎಡನೀರು ಸ್ವಾಮೀಜೀಸ್ ವಿದ್ಯಾಸಂಸ್ಥೆ ಹಿಂದಿನಿಂದಲೂ ಅತ್ಯಪೂರ್ವ ಸಾಧಕ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದ ಪ್ರತಿಷ್ಠಿತ ಶಾಲೆಯಾಗಿದೆ. ಶಿಕ್ಷಣದ ವಿವಿಧ ಹಂತಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವುದರ ಜೊತೆಗೆ ಸಾಧನೆಗೆ ಕೃತಾರ್ಥತೆಯನ್ನು ತರುತ್ತದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.
ಎಡನೀರಿನ ಶ್ರೀಸ್ವಾಮೀಜೀಸ್ ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ಶಾಲೆಯ ಕಳೆದ ಸಾಲಿನ ಹತ್ತನೇ ತರಗತಿ, ಪ್ಲಸ್ ಟು ಹಾಗೂ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಲ್ಲಿ ಅತ್ಯುಚ್ಚ ಸಾಧನೆಗೈದ ವಿದ್ಯಾರ್ಥಿಗಳಿಗೆ ಶ್ರೀಮಠದ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿಳಿಗೆ ಶುಭಹಾರೈಸಿ ಶ್ರೀಗಳು ನಲ್ನುಡಿಗಳನ್ನಾಡಿದರು.
ಹೈಯರ್ ಸೆಕೆಂಡರಿ ಪ್ರಾಂಶುಪಾಲ ನಾರಾಯಣ ಮಾಸ್ತರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಮಧುಸೂದನನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದರು. ಸೂರ್ಯನಾರಾಯಣ ಎಡನೀರು, ಹೈಸ್ಕೂಲು, ಹೈಸ್ಕೂಲು ವಿಭಾಗದ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.