ಇದರಿಂದ ಚಂಡಮಾರುತದ ರಭಸಕ್ಕೆ ಉಂಟಾಗುವ ಹಾನಿಯ ಪ್ರಮಾಣ ಕೊಂಚ ತಗ್ಗುವ ನಿರೀಕ್ಷೆಯಿದೆ. ಪುದುಚೆರಿಯ ಈಶಾನ್ಯ ವಲಯದಲ್ಲಿ ಬೀಸುತ್ತಿರುವ ಗಾಳಿ ಮೂರು ಗಂಟೆಗಳಲ್ಲಿ ಕ್ರಮೇಣ 65-75 ಕಿಮೀ ವೇಗಕ್ಕೆ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಪುದುಚೆರಿಯ ಈಶಾನ್ಯ ಭಾಗದಲ್ಲಿ ಗಾಳಿಯು ಗಂಟೆಗೆ 100-110 ಕಿಮೀ ವೇಗದಲ್ಲಿ ಬೀಸುತ್ತಿದ್ದು, ಈಗಲೂ ಅಪಾಯ ಕಡಿಮೆಯಾಗಿಲ್ಲ. ಇದುವರೆಗೂ ಯಾವುದೇ ಸೋವು ನೋವಿನ ವರದಿಯಾಗಿಲ್ಲ. ಚಂಡಮಾರುತದ ಪರಿಣಾಮವಾಗಿ ಎರಡು ದಿನದಿಂದ ಭಾರಿ ಮಳೆಯಾಗುತ್ತಿತ್ತು. ಚಂಡಮಾರುತ ಅಪ್ಪಳಿಸುವ ವೇಳೆಗೆ ಅದರ ಪರಿಣಾಮ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿತ್ತು. ಆದರೆ ಇದುವರೆಗೂ ಅಂತಹ ಭೀಕರ ಸ್ಥಿತಿ ನಿರ್ಮಾಣವಾಗಿಲ್ಲ. ಮುಂದಿನ ಆರುಗಂಟೆಗಳ ಬಳಿಕ ಮಳೆ ಮತ್ತು ಗಾಳಿ ತೀವ್ರತೆ ಕಡಿಮೆಯಾಗಲಿದೆ ಎನ್ನಲಾಗಿದೆ.
ಕೆಲವು ಭಾಗಗಳಲ್ಲಿ ಗೋಡೆ ಕುಸಿತದ ಪ್ರಕರಣಗಳು ವರದಿಯಾಗಿವೆ. ನಿವಾರ್ ವಾಯವ್ಯ ದಿಕ್ಕಿನಡೆಗೆ ಚಲಿಸಲಿದೆ. ಚಂಡಮಾರುತದ ಕೇಂದ್ರ ಭಾಗವು ಭೂಮಿಗೆ ಅಪ್ಪಳಿಸುವಾಗ ದುರ್ಬಲವಾಗಿದ್ದರೂ ಅದರ ಕೆಲವು ಭಾಗ ಇನ್ನೂ ಸಮುದ್ರ ಮೇಲ್ಭಾಗದಲ್ಲಿದೆ. ಅಲ್ಲಿನ ಗಾಳಿಯು ವೇಗವಾಗಿಯೇ ಇದೆ. ಹೀಗಾಗಿ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.