ಕೊಚ್ಚಿ: ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರು ಚಿನ್ನ ಕಳ್ಳಸಾಗಣೆಗೆ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಕೆ.ಎಸ್.ರಾಧಾಕೃಷ್ಣನ್ ಆರೋಪಿಸಿದ್ದಾರೆ. ರಾಜತಾಂತ್ರಿಕ ಮಾರ್ಗದ ಮುಖಾಂತರ ಕಳುಹಿಸಿದ್ದ ಕುರಾನ್ ಗ್ರಂಥವನ್ನು ಪಡೆದ ಪ್ರಕರಣಕ್ಕೆ ಸಂಬಂಧಿಸಿ ಜಲೀಲ್ ಅವರಿಗೆ ಕಸ್ಟಮ್ಸ್ ವಿಭಾಗವು ನೋಟಿಸ್ ನೀಡಿದ್ದಕ್ಕೆ ಬಿಜೆಪಿ ಈ ರೀತಿ ಪ್ರತಿಕ್ರಿಯಿಸಿದೆ.
'ಜಲೀಲ್ ವಿರುದ್ಧ ಮುಖ್ಯಮಂತ್ರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಸಚಿವರು ಚಿನ್ನ ಹಾಗೂ ಹಣದ ಕಳ್ಳಸಾಗಣೆಗೆ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ' ಎಂದು ರಾಧಾಕೃಷ್ಣನ್ ಹೇಳಿದ್ದಾರೆ.
'ಜಲೀಲ್ ಅವರು ವೈಯಕ್ತಿಕ ಕೆಲಸಗಳಿಗೆ ಯುಎಇ ಕಾನ್ಸುಲೇಟ್ ಅನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದ ಕಾನೂನನ್ನು ಉಲ್ಲಂಘಿಸಲು ಹಿಂಜರಿಯುವುದಿಲ್ಲ' ಎಂದೂ ಅವರು ದೂರಿದ್ದಾರೆ.
ಜಲೀಲ್ ಅವರಿಗೆ ಸೋಮವಾರ (ನ.9) ವಿಚಾರಣೆಗೆ ಹಾಜರಾಗುವಂತೆ ಕಸ್ಟಮ್ಸ್ ನೋಟಿಸ್ ನೀಡಿದೆ. ಕುರಾನ್ ಗ್ರಂಥದ ಆಮದು ಸೇರಿದಂತೆ ತನಿಖೆಯ ಭಾಗವಾಗಿ ಇತರೆ ವಿಷಯಗಳ ಬಗ್ಗೆಯೂ ಸಚಿವರಿಂದ ಹಲವು ಸ್ಪಷ್ಟನೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಕೇಳಲಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿದ್ದವು.