ತಿರುವನಂತಪುರ: ಅಕ್ರಮ ಹಣ ವರ್ಗಾವಣೆ ಹಾಗೂ ಡ್ರಗ್ಸ್ ಪೂರೈಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಕೇರಳದ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಪತ್ನಿ ಜಾರಿ ನಿರ್ದೇಶನಾಲಯದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೊಡಿಯೇರಿ ನಿವಾಸದಲ್ಲಿ ನಡೆಸಲಾದ ಪಂಚನಾಮೆಗೆ (ಸಾಕ್ಷ್ಯ ಸಂಗ್ರಹ ಕಡತ)ಕ್ಕೆ ಸಹಿ ಹಾಕಲು ಬಿನೀಶ್ ಪತ್ನಿ ನಿರಾಕರಿಸಿದ್ದು ಹೈಡ್ರಾಮಾಗೆ ಕಾರಣವಾಯಿತು.
ಬೆಳಿಗ್ಗೆ 9 ಗಂಟೆಗೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯ ರಾತ್ರಿ ವೇಳೆಗೆ ಸಾಕ್ಷ್ಯ ಸಂಗ್ರಹವನ್ನು ಪೂರ್ಣಗೊಳಿಸಿದ್ದು, ನವೆಂಬರ್ 5 ರಂದು ಪಂಚನಾಮೆಯ ಕಡತಕ್ಕೆ ಸಹಿ ಹಾಕಿಸಿಕೊಳ್ಳಲು ಬಿನೀಶ್ ನಿವಾಸಕ್ಕೆ ಬಂದಿದ್ದರು. ಜಾರಿ ನಿರ್ದೇಶನಾಲಯ ತಂಡ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯ ಅನೂಪ್ ಮೊಹಮ್ಮದ್ ರ ಕ್ರೆಡಿಟ್ ಕಾರ್ಡ್ ನ್ನು ವಶಕ್ಕೆ ಪಡೆದಿದ್ದರು. ಆದರೆ ಬಿನೀಶ್ ಪತ್ನಿ ಇ.ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದು ಆ ಕ್ರೆಡಿಟ್ ಕಾರ್ಡ್ ನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳೇ ತಂದಿದ್ದರು ಎಂದು ಆರೋಪಿಸಿದ್ದಾರೆ.
ದಾಳಿ ನಡೆದಾಗ ಬಿನೀಶ್ ಪತ್ನಿ ಹಾಗೂ ತಾಯಿ ಮಾತ್ರ ಮನೆಯಲ್ಲಿದ್ದರು. ಸಾಕ್ಷ್ಯಗಳನ್ನು ಅಧಿಕಾರಿಗಳೇ ಇರಿಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ನಾವು ಮನೆಯಲ್ಲಿ ಯಾರೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದಿಲ್ಲ. ಆದರೆ ಇ.ಡಿ ಅಧಿಕಾರಿಗಳೇ ಅದನ್ನು ನಮ್ಮ ಮನೆಯಲ್ಲಿರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.