ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ವತಿಯಿಂದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಯಕ್ಷಾರ್ಥ ಗಾನ ವೈವಿಧ್ಯ ಎನ್ನುವ ವಿಶಿಷ್ಟವಾದ ಕಾರ್ಯಕ್ರಮ ಜರಗಿತು.
ಶ್ರೀ ದೇವರ ಪೂಜೆಯೊಂದಿಗೆ ಕಲಾಸಂಘದ ಭಾಗವತ ವಿಶ್ವವಿನೋದ ಬನಾರಿಯವರ ಮಾರ್ಗದರ್ಶನದಲ್ಲಿ ನಾರಾಯಣ ದೇಲಂಪಾಡಿ ಅವರ ನಿರೂಪಣೆಯೊಂದಿಗೆ ಪರಂಪರೆಯ ಪದ್ಯಗಳನ್ನಳವಡಿಸಿ ದೇವೇಂದ್ರನ ಪೀಠಿಕಾ ಸನ್ನಿವೇಶ, ಪಂಚವಟಿಯ ರಾಮ ಲಕ್ಷ್ಮಣ ಮತ್ತು ಶೂರ್ಪನಖೆ, ಅಂಗದ ಸಂಧಾನದಲ್ಲಿ ಸುಗ್ರೀವ, ಕೃಷ್ಣ ಸಂಧಾನದ ಕರ್ಣ- ಅಶ್ವತ್ಥಾಮ ಹೀಗೆ ಪ್ರತ್ಯೇಕ ಪ್ರತ್ಯೇಕ ರೂಪಕಗಳಾಗಿ ಪ್ರಸ್ತುತಪಡಿಸಲಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಎಂಕಣ್ಣಮೂಲೆ. ಚೆಂಡೆ ಮದ್ದಳೆಯಲ್ಲಿ ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು.
ಅರ್ಥಧಾರಿಗಳಾಗಿ ರಮಾನಂದ ರೈ ದೇಲಂಪಾಡಿ, ಎ.ಜಿ.ಮುದಿಯಾರು, ನಾರಾಯಣ ದೇಲಂಪಾಡಿ, ನಾರಾಯಣ ಪಾಟಾಳಿ ಮಯ್ಯಾಳ, ರಾಮ ನಾಯ್ಕ ದೇಲಂಪಾಡಿ, ರಜತ್ ಡಿ.ಆರ್, ವಿದ್ಯಾಭೂಷಣ ಪಂಜಾಜೆ, ಗೋಪಾಲಕೃಷ್ಣ ರೈ ಮುದಿಯಾರು ಪಾತ್ರಧಾರಿಗಳಾಗಿ ತಮ್ಮ ಕಲಾಸಂಪನ್ನತೆಯನ್ನು ಪ್ರತಿಬಿಂಬಿಸಿದರು.
ಈ ಕಲಾ ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ಬ್ರಹ್ಮೈಕ್ಯರಾದ ಪೂಜ್ಯ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ ಸಿಮಂತೂರು ನಾರಾಯಣ ಶೆಟ್ಟಿ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಡಾ.ಪಟ್ಟಾಜೆ ಗಣೇಶ ಭಟ್, ಉಡುಪುಮೂಲೆ ಗೋಪಾಲಕೃಷ್ಣ ಭಟ್, ರಘುರಾಮ ಗೋಳಿಯಡ್ಕ ಹಾಗೂ ಸಂಘದ ಹಿರಿಯ ಸದಸ್ಯ ದೇಲಂಪಾಡಿ ಕೃಷ್ಣಪ್ಪ ಟೈಲರ್ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.ನಂದಕಿಶೋರ ಬನಾರಿ ಸ್ವಾಗತಿಸಿದರು. ಲತಾ ಆಚಾರ್ಯ ಬನಾರಿ ವಂದಿಸಿದರು.