ಉಪ್ಪಳ: ಉಪ್ಪಳ ರೈಲ್ವೆ ನಿಲ್ದಾಣದಲ್ಲಿ ಈಗಿರುವ ವಾಣಿಜ್ಯ ಗುಮಾಸ್ತರನ್ನು ಖಾಸಗಿ ನಿಲುಗಡೆ ಏಜೆಂಟ್ ಆಗಿ ಬದಲಾಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ರೈಲ್ವೆ ಏಜೆಂಟರಿಗೆ ಟೆಂಡರ್ ನೀಡಲಾಗಿದೆ.
ಸೇವ್ ಉಪ್ಪಳ ರೈಲ್ವೆ ನಿಲ್ದಾಣ ಸಮಿತಿಯ ನೇತೃತ್ವದಲ್ಲಿ ವ್ಯಾಪಾರಿಗಳ ಬೆಂಬಲದೊಂದಿಗೆ ನಡೆದ ನಿರಂತರ ಹೋರಾಟ ಮತ್ತು ಉಪ್ಪಳ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ರೈಲುಗಳನ್ನು ನಿಲ್ಲಿಸಲು ಅವಕಾಶ ನೀಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಕಾಸರಗೋಡ ಸಂಸದ ರಾಜಮೋಹನ್ ಉಣ್ಣಿತ್ತಾನ್, ಮಾಜಿ ಸಂಸದ ಪಿ. ಕರುಣಾಕರನ್, ಪಿಎಸಿ ಅಧ್ಯಕ್ಷ ಪಿ. ಕೆ ಕೃಷ್ಣದಾಸ್ ಮೊದಲಾದವರೊಂದಿಗಿನ ಮಾತುಕತೆ, ಎಚ್‍ಆರ್‍ಪಿಎಂ ನೇತೃತ್ವದ ಒಂದು ತಿಂಗಳ ಕಾಲದ ಹೋರಾಟ ಮತ್ತು ಇತರ ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳ ನೇತೃತ್ವದ ಪ್ರಯತ್ನಗಳಿಂದ ರೈಲು ನಿಲ್ದಾಣ ಒಂದಷ್ಟು ಅಭಿವೃದ್ದಿ ಹೊಂದಲು ಕಾರಣವಾಯಿತು.
ಇದಕ್ಕೂ ಮೊದಲು 2018 ರಲ್ಲಿ ಐಬಿ ಕಾರ್ಯಾಚರಣೆ ಆರಂಭಿಸಿದ ಸಂದರ್ಭ ಉಪ್ಪಳ ರೈಲು ನಿಲ್ದಾಣಕ್ಕೆ ನಿಲುಗಡೆ ಏಜೆಂಟ್ ನೇಮಕ ಮಾಡಲು ಪ್ರಯತ್ನಿಸಿತ್ತು. ಆ ಸಮಯದಲ್ಲಿ, ಹಾಲ್ಟ್ ಏಜೆಂಟರಿಗೆ ಟೆಂಡರ್ ನೀಡಲಾಯಿತು. ಸೇವ್ ಉಪ್ಪಳ ರೈಲ್ವೆ ನಿಲ್ದಾಣ ಸಮಿತಿ ಅಧಿಕಾರಿಗಳು ಡಿಆರ್‍ಎಂ ಕಚೇರಿಗೆ ತೆರಳಿ ನೇರವಾಗಿ ಚರ್ಚಿಸಿದ ಬಳಿಕ ಟೆಂಡರ್ ಹಿಂಪಡೆಯಲಾಗಿತ್ತು.
ಮುಂದಿನ ಹಂತದಲ್ಲಿ ಉಪ್ಪಳ ನಿಲ್ದಾಣವನ್ನು ಐಬಿಗೆ ಪರಿವರ್ತಿಸಿದಾಗ ಇಲ್ಲಿದ್ದ ಸ್ಟೇಷನ್ ಮಾಸ್ಟರ್ಸ್ ಬದಲಿಗೆ ತಾತ್ಕಾಲಿಕ ಏಜೆಂಟ್ ನ್ನು ನೇಮಿಸಲಾಯಿತು. ಆದರೂ ಸೇವ್ ಉಪ್ಪಳ ರೈಲ್ವೆ ನಿಲ್ದಾಣ ಸಮಿತಿ ಮಧ್ಯಪ್ರವೇಶಿಸಿ, ನಿಲುಗಡೆ ಏಜೆಂಟ್ ಬದಲಿಗೆ ವಾಣಿಜ್ಯ ಗುಮಾಸ್ತರನ್ನು ನೇಮಿಸಬೇಕು ಮತ್ತು ಬುಕಿಂಗ್ ಸೌಲಭ್ಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿತು. ಇದನ್ನು ರೈಲ್ವೆ ಇಲಾಖೆ ಅನುಮೋದಿಸಿ ವಾಣಿಜ್ಯ ಗುಮಾಸ್ತರನ್ನು ನೇಮಿಸಿತು. ಮಾರ್ಚ್ 8 ರಿಂದ ಬುಕ್ಕಿಂಗ್ ಸೌಲಭ್ಯವನ್ನು ಪ್ರಾರಂಭಿಸಲಾಯಿತು. ಆದರೆ, ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಕೌಂಟರ್ ಮೂಲಕ ಟಿಕೆಟ್ ವಿತರಣೆ ಸ್ಥಗಿತಗೊಂಡ ಕಾರಣ ಮಾರ್ಚ್ 22 ರಂದು ಉಪ್ಪಳ ಸಹಿತ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಮಾರಾಟ ಸ್ಥಗಿತಗೊಂಡಿತ್ತು. ಏತನ್ಮಧ್ಯೆ, ರೈಲ್ವೆ ವಾಣಿಜ್ಯ ಗುಮಾಸ್ತರನ್ನು ಉಪ್ಪಳದಿಂದ ಹಿಂಪಡೆಯುವ ಪ್ರಯತ್ನಗಳಾಗುತ್ತಿರುವ ಬಗ್ಗೆ ಸೂಚನೆಗಳು ಲಭ್ಯವಾದವು. ಇದೀಗ ತಾತ್ಕಾಲಿಕ ಏಜೆಂಟ್ ನ್ನು ನೇಮಿಸಲು ಸನ್ನಾಹಗಳು ನಡೆದಿವೆ ಎನ್ನಲಾಗಿದೆ. ಮುಂಗಡ ಟಿಕೆಟ್ ಕಾಯ್ದಿರಿಸಲು ಹಾಲ್ಟ್ ಏಜೆಂಟರಿಗೆ ಅಧಿಕಾರವಿಲ್ಲ. ಇದರೊಂದಿಗೆ ಉಪ್ಪಳದಲ್ಲಿ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನೂ ಸ್ಥಗಿತಗೊಳಿಸಲಾಗುವುದು. ಹೊಸ ರೈಲ್ವೆ ಮಾರ್ಗದ ಮೊದಲ ಆರು ತಿಂಗಳಲ್ಲಿ, ಹೊಸ ರೈಲುಗಳು ಅಥವಾ ಇತರ ಸೌಲಭ್ಯಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಒದಗಿಸಲಾಗುತ್ತದೆ ಮತ್ತು ಅನುಸರಣಾ ಕ್ರಮ ಕೈಗೊಳ್ಳಲಾಗುತ್ತದೆ. ಉಪ್ಪಳ ನಿಲ್ದಾಣದ ವಿಷಯದಲ್ಲಿ ಅಂತಹ ಕಾನೂನನ್ನು ಗಾಳಿಗೆ ತೂರಲಾಗಿದೆ. ಇದು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರೈಲ್ವೆಯ ವಾಣಿಜ್ಯ ವಿಭಾಗದಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲದಿರುವುದು ಏಜೆಂಟರಿಗೆ ಟೆಂಡರ್ ನೀಡಲು ಕಾರಣ ಎಂದು ತಿಳಿದುಬಂದಿದೆ. ಸಿಬ್ಬಂದಿ ಕೊರತೆಯಿಂದಾಗಿ ಕೆಲವು ಸರಕುಗಳ ಶೆಡ್‍ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ಈ ಹಿಂದೆ, ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ರೈಲ್ವೆಯ ಪಿಎಸಿ ಅಧ್ಯಕ್ಷರು ಉಪ್ಪಳವನ್ನು ಐಬಿ ಆಗಿ ಪರಿವರ್ತಿಸಿದಾಗ, ಉಪ್ಪಳದಲ್ಲಿ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು ಮತ್ತು ಈಗಿನ ಕ್ರಮ ಅಂತೆಯೇ ಮುಂದುವರಿಯುತ್ತದೆ ಎಂದು ಭರವಸೆ ನೀಡಿದ್ದರು. ಅಧಿಕಾರಿಗಳು ಇದನ್ನು ಮರೆತಿರುವರೆಂದು ಆರೋಪಿಸಲಾಗಿದೆ.
ಸೇವ್ ಉಪ್ಪಳ ರೈಲ್ವೆ ನಿಲ್ದಾಣ ಸಮಿತಿ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಪಾಲಕ್ಕಾಡ್ ವಿಭಾಗ ರೈಲ್ವೇ ಡಿ.ಆರ್.ಎಂ. ಗೆ ತಮ್ಮ ಪ್ರತಿಭಟನಾ ಪತ್ರವನ್ನು ಕಳುಹಿಸಿದೆ. ಸಮಿತಿ ಪದಾಧಿಕಾರಿಗಳಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಅಜೀಮ್ ಮಣಿಮುಂಡ, ಮೊಹಮ್ಮದ್ ರಫೀಕ್ ಕೆ., ಎಂ.ಕೆ.ಅಲಿ ಮಾಸ್ತರ್ ಮತ್ತು ಮುಹಮ್ಮದ್ ನಾಫಿ ಜಂಟಿ ಹೇಳಿಕೆಯಲ್ಲಿ ಇಲಾಖೆಯ ಕ್ರಮವನ್ನು ಖಂಡಿಸಿ ನ್ಯಾಯದೊರಕಿಸಲು ಆಗ್ರಹಿಸಿದೆ.