ಬದಿಯಡ್ಕ: ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರೂಪಕಲ್ಪನೆ ನೀಡಿದ ಮೀಸಲಾತಿ ಸೌಲಭ್ಯವನ್ನು ಕಡಿತಗೊಳಿಸುವ ಪ್ರಯತ್ನ ಸರ್ಕಾರಗಳಿಂದ ನಡೆಯುತ್ತಿದ್ದು, ಈ ಬಗ್ಗೆ ಪುನರ್ ಪರಿಶೀಲನೆ ಅನಿವಾರ್ಯವಾಗಿದೆ. ಹೀಗೆಯೇ ಮುಂದುವರಿದರೆ ಪರಿಶಿಷ್ಟ ಜಾತಿ ವಿಭಾಗದವರು ತೀವ್ರ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಗೌರವಾಧ್ಯಕ್ಷ ಆನಂದ ಕೆ.ಮವ್ವಾರು ಹೇಳಿದ್ದಾರೆ.
ಸಮಿತಿಯ ಆಶ್ರಯದಲ್ಲಿ ಮೊಗೇರ ಪ್ರತಿಭೆಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರಿದ ಸಮಾಜಕ್ಕೆ ಮೀಸಲಾತಿ ನೀಡುವ ಮೂಲಕ ಹಿಂದುಳಿದವರ ಸವಲತ್ತುಗಳಿಗೆ ಸಂಚಕಾರ ಒದಗಬಹುದೆಂದು ಅವರು ನುಡಿದರು. ಸಮಿತಿಯ ಜಿಲ್ಲಾಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿ ಮಾತನಾಡಿ ಮದರು ಮಹಾಮಾತೆಗೆ ಮಧೂರಿನಲ್ಲಿ ಸೂಕ್ತ ಸ್ಥಾನಮಾನ ಲಭಿಸಬೇಕೆಂದು ಹೋರಾಡುತ್ತಿರುವ ಸಂಘಟನೆಯು ಮೊಗೇರ ಸಮಾಜದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಪ್ರತಿಭೆಗಳನ್ನು ಅಭಿನಂದಿಸಿ ಪ್ರೋತ್ಸಾಹಿಸುವ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಡಾ.ಪಿ.ವೆಂಕಟರಾಜ ಪುಣಿಂಚತ್ತಾಯರ ಹೆಸರಿನಲ್ಲಿ ಕೇರಳ ತುಳು ಅಕಾಡೆಮಿಯಿಂದ ಗೌರವ ಸನ್ಮಾನ ಪಡೆದ ಕವಿ, ಜಾನಪದ ಸಂಶೋಧಕ ಸುಂದರ ಬಾರಡ್ಕ, ಪ್ಲಸ್ ಟುವಿನಲ್ಲಿ ಉನ್ನತ ಅಂಕ ಗಳಿಸಿದ ಸುಶ್ಮಿತಾ ಸಿ.ಎಚ್., ಎಸ್.ಎಸ್.ಎಲ್.ಸಿ.ಯಲ್ಲಿ ಉನ್ನತ ಅಂಕ ಗಳಿಸಿದ ಮೇಘಾ ವಸಂತ್ ಅವರನ್ನು ಸ್ಮರಣಿಕೆ, ನಗದು ನೀಡಿ ಅಭಿನಂದಿಸಲಾಯಿತು. ಧರ್ಮದರ್ಶಿ ಬಾಬು ಪಚ್ಲಂಪಾರೆ, ರಾಮಪ್ಪ ಮಂಜೇಶ್ವರ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ದಿ.ಕೃಷ್ಣ ದರ್ಬೆತ್ತಡ್ಕ, ನಿಟ್ಟೋಣಿ ಬಂದ್ಯೋಡು, ಡಿ.ಕೃಷ್ಣದಾಸ್, ಸುರೇಶ ಅಜಕ್ಕೋಡು, ಜಯಾರಾಮಪ್ಪ, ಸುಂದರ ಮಾಳಂಗೈ, ಹರೀಶ್ಚಂದ್ರ ಪುತ್ತಿಗೆ, ಪೂರ್ಣಿಮಾ ನೀರೋಳಿ, ನಾರಾಯಣ ಬಾರಡ್ಕ, ಅನಿಲ್ ಅಜಕ್ಕೋಡು, ಚಂದ್ರ ಮಲ್ಲಡ್ಕ, ಶಶಿಧರ ಅಜಕ್ಕೋಡು ಶುಭಹಾರೈಸಿದರು. ಅಭಿನಂದನೆ ಸ್ವೀಕರಿಸಿದವರು ಕೃತಜ್ಞತೆ ಸಲ್ಲಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಶಂಕರ ದರ್ಭೆತ್ತಡ್ಕ ಸ್ವಾಗತಿಸಿ, ಸಾಂಸ್ಕøತಿಕ ಸಂಚಾಲಕ ರಾಮ ಪಟ್ಟಾಜೆ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ್ ಧರ್ಮತ್ತಡ್ಕ ವಂದಿಸಿದರು.