ಬೀಜಿಂಗ್: ಚೀನಾದಿಂದಲೇ ಕೊರೊನಾವೈರಸ್ ಹುಟ್ಟು ಆರಂಭವಾಗಿದ್ದು, ಇದೀಗ ಚೀನಾ ಲಸಿಕೆಯ ಸುರಕ್ಷತೆಯ ಕುರಿತು ಹಲವು ಅನುಮಾನಗಳು ಎದ್ದಿವೆ.
ಚೀನಾದ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಮುಂದುವರೆದಿದ್ದು, ಲಸಿಕೆಯ ಸುರಕ್ಷತೆ ಕುರಿತಂತೆ ಪಶ್ಚಿಮಾತ್ಯ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿವೆ.
ಜಾಗತಿಕವಾಗಿ ಚೀನಾದ ಕೊರೊನಾ ವೈರಸ್ ಲಸಿಕೆಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಈ ನಡುವೆ, ಜಗತ್ತಿನಾದ್ಯಂತ ಸಂಶೋಧಕರು ಅಭೂತಪೂರ್ವ ವೇಗದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕೊವಿಡ್ 19ನ್ನು ಅಂತ್ಯಗಾಣಿಸುವ ಅಗತ್ಯವಿದೆ.
ಈಗಾಗಲೇ ಚೀನಾದಲ್ಲಿ ಕೆಲ ಲಸಿಕೆಗಳನ್ನು ತುರ್ತು ಬಳಕೆಗೆ ವಿತರಣೆ ಮಾಡಲಾಗಿದೆ. ಆದರೆ ಲಸಿಕೆಯಪರಿಣಾಮಗಳ ಬಗ್ಗೆ ಚೀನಾ ಮಾಹಿತಿ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ವಿವಿಧ ರಾಷ್ಟ್ರಗಳು ಹೇಳಿವೆ.
ಈಗಾಗಲೇ ಬ್ರಿಟನ್‌ನ ಆಸ್ಟ್ರಾಜೆನಕಾ ಹಾಗೂ ಅಮೆರಿಕದ ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಲಸಿಕೆಗಳು ಪ್ರಯೋಗದಲ್ಲಿ ಸಮಸ್ಯೆ ಉಂಟಾಗಿ ತಾತ್ಕಾಲಿಕವಾಗಿ ಪ್ರಯೋಗ ನಿಲ್ಲಿಸಿತ್ತು. ಆದರೆ ಚೀನಾ ಲಸಿಕೆಗಳಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ಇದುವರೆಗೂ ವರದಿಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.