ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಈ ಬಾರಿಯ ಚುನಾವಣೆಯ ಪ್ರಚಾರ ಚಟುವಟಿಕೆಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ.
ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರಕೃತಿ ಸೌಹಾರ್ದ ಮತ್ತು ಮಣ್ಣಲ್ಲಿ ಸುಲಭವಾಗಿ ಬೆರೆಯಬಲ್ಲ ಸಾಮಾಗ್ರಿಗಳನ್ನು ಮಾತ್ರ ಈ ಚಟುವಟಿಕೆಗಳಲ್ಲಿ ಬಳಸಬೇಕು ಎಂಬ ರಾಜ್ಯ ಚುನಾವಣೆ ಆಯೋಗದ ಆದೇಶ ಪ್ರಕಾರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪ್ಲಾಸ್ಟಿಕ್, ಪಿ.ವಿ.ಸಿ. ಇತ್ಯಾದಿಗಳಿಮದ ನಿರ್ಮಿಸಿದ ಫಲಕ, ಧ್ವಜ, ತೋರಣ, ಫ್ಲೆಕ್ಸ್ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಕಾಗದಗಳು, ಪ್ಲಾಸ್ಟಿಕ್ ದಾರಗಳು, ಪ್ಲಾಸ್ಟಿಕ್ ರಿಬ್ಬನ್ ಇತ್ಯಾದಿ ಬಳಸಕೂಡದು. ಚುನಾವಣೆ ಸಂಬಂಧ ಎಲ್ಲ ಅಧಿಕೃತ ಅಗತ್ಯಗಳಿಗೆ ಹತ್ತಿಯ ಬಟ್ಟೆ, ಕಾಗದ, ಪಾಲಿ ಎತ್ತಲಿನ್ ಇತ್ಯಾದಿ ಸಾಮಾಗ್ರಿಗಳನ್ನು , ಮರುಬಳಕೆ ನಡೆಸಬಲ್ಲ ಸಾಮಾಗ್ರಿಗಳನ್ನು ಮಾತ್ರ ಉಪಯೋಗಿಸಬೇಕು. ಮತಗಟ್ಟೆಗಳಲ್ಲೂ, ಸ್ಟೇಷನರಿಗಳ ವಿತರಣೆ ಕೇಂದ್ರಗಳಲ್ಲೂ, ಮತಗಣನೆ ಕೇಂದ್ರಗಳಲ್ಲೂ ಜೈವಿಕ, ಅಜೈವಿಕ ತ್ಯಾಜ್ಯಗಳನ್ನು ವಿಂಗಡಿಸಿ ಸಂಗ್ರಹಿಸಲು ಯಥಾಕ್ರಮದಲ್ಲಿ ಹಳದಿ ಮತ್ತು ಕೆಳಪು ಬಣ್ಣದ ಕ್ಯಾರಿ ಬ್ಯಾಗ್ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಒದಗಿಸಬೇಕು. ತದನಂತರ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ನಡೆಸಲಾಗುವುದು. ಮತದಾನ ನಡೆದ ನಂತರ ಆಯಾ ಪ್ರದೇಶಗಳ ಪ್ರಚಾರ ಸಾಮಾಗ್ರಿಗಳನ್ನು ಅಭ್ಯರ್ಥಿಗಳೂ, ರಾಜಕೀಯ ಪಕ್ಷಗಳೂ ತೆರವುಗೊಳಿಸಬೇಕು ಯಾ ಏಜೆನ್ಸಿಗಳಿಗೆ ಹೊಣೆ ನೀಡಬೇಕು. ಈ ಆದೇಶ ಉಲ್ಲಂಘಿಸಿದಲ್ಲಿ 5 ದಿನಗಳೊಳಗೆ ಅವುಗಳನ್ನು ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ತೆರವುಗೊಳಿಸಿ, ಅವುಗಳ ಖರ್ಚುವೆಚ್ಚವನ್ನು ಅಭ್ಯರ್ಥಿಗಳಿಂದ ವಸೂಲಿ ಮಾಡುವರು.