ನವದೆಹಲಿ: ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿಯೊಂದು ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಾ ದೆಹಲಿ ತಲುಪಿರುವ ರೈತರು ಪೆÇಲೀಸರು ನಿಗದಿಪಡಿಸಿರುವ ನಿರಂಕರಿ ಸಮಾಗಮ ಮೈದಾನದಲ್ಲಿಯೇ ಪ್ರತಿಭಟನೆ ನಡೆಸಬೇಕು ಎಂದು ಒತ್ತಾಯಿಸಿರುವ ಅಮಿತ್ ಶಾ, ಡಿಸೆಂಬರ್ 3ಕ್ಕಿಂತ ಮುಂಚಿತವಾಗಿಯೇ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಡಿಸೆಂಬರ್ 3ರಂದು ನರೇಂದ್ರ ಸಿಂಗ್ ತೋಮರ್ ಕರೆದಿರುವ ಸಭೆಯಲ್ಲಿ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಅವರೆಲ್ಲಾ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಆಲಿಸಲಾಗುವುದು ಎಂದರು. ಅನೇಕ ಸ್ಥಳ ಹಾಗೂ ಹೆದ್ದಾರಿಗಳಲ್ಲಿ ತಮ್ಮ ಟ್ರಾಕ್ಟರ್ ಗಳೊಂದಿಗೆ ರೈತರು ಪ್ರತಿಭಟನೆಗೆ ಕುಳಿತಿದ್ದಾರೆ. ದೊಡ್ಡ ಮೈದಾನಕ್ಕೆ ರೈತರನ್ನು ಸ್ಥಳಾಂತರಿಸಲು ದೆಹಲಿ ಪೆÇಲೀಸರು ಸಿದ್ಧರಾಗಿದ್ದು, ಪೆÇಲೀಸರು ಗೊತ್ತುಪಡಿಸಿರುವ ಸ್ಥಳಕ್ಕೆ ತೆರಳುವಂತೆ ರೈತರಿಗೆ ಅವರು ಮನವಿ ಮಾಡಿದರು.
ಈ ಮಧ್ಯೆ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ದೆಹಲಿ- ಹರಿಯಾಣ ಭಾರತೀಯ ಕಿಸಾನ್ ಸಂಘದ ಮುಖಂಡ ಜಗಜಿತ್ ಸಿಂಗ್, ಆರಂಭದಲ್ಲಿಯೇ ಅಮಿತ್ ಶಾ ಸಭೆಗೆ ಕರೆದಿರುವುದು ಸರಿಯಲ್ಲ, ಯಾವುದೇ ಷರತ್ತು ಇಲ್ಲದೆ ತೆರೆದ ಮನಸ್ಸಿನಿಂದ ಮಾತುಕತೆ ನಡೆಸಬೇಕು, ನಮ್ಮ ಪ್ರತಿಕ್ರಿಯೆ ಬಗ್ಗೆ ನಾಳೆ ಬೆಳಗ್ಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.